ಬಂಟ್ವಾಳ, ಜ 08 (DaijiworldNews/SM): ಗಾಂಜಾ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ವ್ಯಕ್ತಿಯೋರ್ವನನ್ನು ಗ್ರಾಮಾಂತರ ಠಾಣಾ ಎಸ್. ಐ. ಪ್ರಸನ್ನ ಅವರು ಬಂಧಿಸಿದ್ದಾರೆ.
ಬಂಟ್ವಾಳ ಸಜೀಪನಡು ಗ್ರಾಮದ ಕಂಚಿನಡ್ಕ ಪದವು ನಿವಾಸಿ, ಶೇಖಬ್ಬ ಅವರ ಪುತ್ರ ಸಿದ್ದಿಕ್ ಯಾನೆ ಅಬೂಬಕ್ಕರ್ ಸಿದ್ದಿಕ್(32) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 5,000/- ರೂ ಮೌಲ್ಯದ 350 ಗ್ರಾಂ ತೂಕದ ನಿಷೇಧಿತ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಜೀಪನಡು ಗ್ರಾಮದ ಕಂಚಿನಡ್ಕ ಪದವು ಎಂಬಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಅವರು ಸಿಬ್ಬಂದಿಯವರೊಂದಿಗೆ ಗಸ್ತಿನಲ್ಲಿರುವ ವೇಳೆ ವ್ಯಕ್ತಿಯೊಬ್ಬನು ಬ್ಯಾಗ್ ಹಿಡಿದುಕೊಂಡು ಕಂಚಿನಡ್ಕ ಪದವಿನ ಅಂಬೇಡ್ಕರ್ ಭವನದ ಬಳಿ ಹೋಗುತ್ತಿದ್ದ. ಆತ ಗಸ್ತಿನಲ್ಲಿರುವ ಪೊಲೀಸರನ್ನು ನೋಡಿ ಓಡಲು ಪ್ರಯತ್ನಿಸಿದಾಗ ಪೊಲೀಸರು ಆತನನ್ನು ವಶಕ್ಕೆ ಪಡೆದು ಬ್ಯಾಗನ್ನು ಪರಿಶೀಲಿಸಿದಾಗ ಅದರಲ್ಲಿ ನಿಷೇದಿತ ಗಾಂಜಾ ಇರುವುದು ಕಂಡು ಬಂದಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.