ಧರ್ಮಸ್ಥಳ, ಜ 08 (DaijiworldNews/SM): ಪೆನ್ವಿಲೈನಿಯಾ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಕ್ಷೇತ್ರದಿಂದ ನಡೆಸುತ್ತಿರುವ ಕಾರ್ಯಕ್ರಮಗಳ ಕುರಿತು ಅಧ್ಯಯನ ನಡಸಿದರು.
ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳ ಜೊತೆ ಮಾತನಾಡಿದ ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಸಮಾಜದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಬಹಳ ಅವಕಾಶಗಳಿವೆ. ಧಾರ್ಮಿಕ ಸಂಸ್ಥೆಗಳು ಧರ್ಮ ಸಂರಕ್ಷಣೆಯ ಜೊತೆಗೆ ಪ್ರಸಕ್ತ ಸಮಾಜದಲ್ಲಿರುವ ಸವಾಲುಗಳನ್ನು ಗುರುತಿಸಿ ಸ್ಪಂದಿಸಿದರೆ ಉತ್ತಮವಾಗುವುದು. ಶ್ರೀ ಕ್ಷೇತ್ರ ಧರ್ಮಸ್ಥಳ ಬಹಳ ವರ್ಷಗಳಿಂದ ಈ ನಿಟ್ಟಿನಲ್ಲಿ ಕರ್ತವ್ಯನಿರ್ವಹಿಸುತ್ತಿದೆ ಎಂದರು.
ಪರಂಪರಾಗತವಾಗಿ ಬಂದಿರುವ ಈ ಕೈಂಕರ್ಯ ಸಮಾಜ ಸೇವೆಯನ್ನು ಮಾಡುವ ವಿಫುಲ ಅವಕಾಶವನ್ನು ನಮಗೆ ಒದಗಿಸಿದೆ. ಯೋಜನೆಗಳನ್ನು ಅನುಷ್ಠಾನಿಸುತ್ತಾ ಬಂದಂತೆ ಹೊಸ ಹೊಸ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಯಿತು. ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುವುದು ಬಹಳ ಸಂತೋಷದಾಯಕ ಹಾಗೂ ಸವಾಲುಗಳು ಸಾಮಾನ್ಯ. ಎಂದಿಗೂ ಸವಾಲುಗಳನ್ನು ಎದುರಿಸಿ ಮುನ್ನಡೆದರೆ ಯಶಸ್ಸು ಸಾಧ್ಯ ಎಂದರು.
ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ನಾಲೆಡ್ಜ್ ಪಾರ್ಟ್ನರ್ ಆಗಿ ಗುರುತಿಸಿದ ಕುರಿತು ಪ್ರಮಾಣ ಪತ್ರವನ್ನು ಹಾಗೂ ಫಲಕವನ್ನು ನೀಡಿ ಡಾ. ಹೆಗ್ಗಡೆಯವರನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪರವಾಗಿ ಪ್ರೊ. ಫೆಮಿಡಾರವರು ಗೌರವಿಸಿದರು.
ಭೇಟಿಯ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್. ಹೆಚ್.ಮಂಜುನಾಥ್ ಗ್ರಾಮೀಣಾಭಿವೃದ್ಧಿ ಯೋಜನೆಯ ಕುರಿತು ವಿವರಿಸಿದರು. ಸಿರಿಗ್ರಾಮೊದ್ಯೋಗ ಸಂಸ್ಥೆಗೆ ಭೇಟಿ ನೀಡಲಾಯಿತು. ಕ್ಷೇತ್ರದ ವಿವಿಧ ವಿಭಾಗಗಳನ್ನು ಭೇಟಿ ಮಾಡಲಾಯಿತು.