ಮಂಗಳೂರು, ಜ 08 (DaijiworldNews/SM): ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದು, ರಾಜ್ಯದಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಬಹುತೇಕ ಕಡೆಗಳಲ್ಲಿ ಕಾರ್ಮಿಕ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿವೆ. ಇದು ದ.ಕ. ಜಿಲ್ಲೆಯನ್ನು ಕೂಡ ಹೊರತಾಗಿಲ್ಲ. ಮುಷ್ಕರದ ಬಿಸಿ ತಟ್ಟದಿದ್ದರೂ ಜಿಲ್ಲೆಯ ವಿವಿಧೆಡೆಗಳಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಈ ನಡುವೆ ಮುಷ್ಕರದ ದಿನ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಎಂಬ ಜಿಲ್ಲಾಧಿಕಾರಿಗಳ ಸಹಿ ಹೊಂದಿದ್ದ ನೋಟೀಸ್ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ನಕಲಿ ಸಹಿಯೊಂದಿಗೆ ನೋಟೀಸ್ ಸಿದ್ಧಪಡಿಸಿರುವ ಕಿಡಿಗೇಡಿಯ ವಿರುದ್ಧ ಕೇಸು ದಾಖಲಾಗಿದ್ದು, ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಐಪಿಸಿ ಕಾಯ್ದೆಯಡಿಯಲ್ಲಿ ದೂರು ದಾಖಲಾಗಿದೆ. ಕಿಡಿಗೇಡಿಯ ವಿರುದ್ಧ ಕ್ರಮಕ್ಕೆ ಜಿಲ್ಲಾಡಳಿತದ ವತಿಯಿಂದ ಪಾಂಡೇಶ್ವರ ಠಾಣೆಗೆ ದೂರು ನೀಡಲಾಗಿದೆ.
ಘಟನೆಯ ವಿವರ:
ಕಾರ್ಮಿಕರು ರಾಷ್ಟ್ರ ವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಭಾರತ್ ಬಂದ್ ಆಗುವ ಸಾಧ್ಯತೆಯನ್ನು ಮಾಧ್ಯಮಗಳು ವ್ಯಕ್ತಪಡಿಸಿದ್ದವು. ಅಲ್ಲದೆ, ಬಹುತೇಕ ಸಾರ್ವಜನಿಕರಲ್ಲೂ ಈ ಬಗ್ಗೆ ಗೊಂದಲ ಉಂಟಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಷ್ಕರಕ್ಕೆ ಬೆಂಬಲವಿಲ್ಲ ಎಂದು ಬಸ್ ಮಾಲಕರು ಸ್ಪಷ್ಟಪಡಿಸಿದ್ದರು. ಆದರೂ, ಕೆಲವೊಬ್ಬರು ಬಂದ್ ನಡೆಯುವ ಸಾಧ್ಯತೆಯ ಬಗ್ಗೆ ಉಲ್ಲೇಖಿಸಿದ್ದರು.
ಈ ನಡುವೆ ಶಾಲಾ ಕಾಲೇಜುಗಳಿಗೂ ಕೂಡ ರಜೆ ಇಲ್ಲ ಎಂಬುವುದಾಗಿ ರಾಜ್ಯ ಸರಕಾರ ಸ್ಪಷ್ಟವಾದ ಆದೇಶವನ್ನು ಹೊರಡಿಸಿತ್ತು. ಆದರೆ, ದ.ಕ. ಜಿಲ್ಲೆಯಲ್ಲಿ ಮಾತ್ರ ಜಿಲ್ಲಾಧಿಕಾರಿಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ ಎಂಬ ಪತ್ರವೊಂದು ಜಿಲ್ಲಾಧಿಕಾರಿಗಳ ಸಹಿ ಹಾಗೂ ಮೊಹರಿನೊಂದಿಗೆ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗ ತೊಡಗಿದೆ. ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದರು. ಈ ಬಗ್ಗೆ ಮಾಹಿತಿ ತಿಳಿದಾಕ್ಷಣ ಜಿಲ್ಲಾಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಹಾಗೂ ನಾನು ಯಾವುದೇ ರಜೆ ಘೋಷಣೆ ಮಾಡಿಲ್ಲ. ಯಾವುದೇ ಆದೇಶ ನೀಡಿ ಸಹಿ ಹಾಕಿಲ್ಲ ಎಂದಿದ್ದಾರೆ.
ಬಳಿಕ ಇದೊಂದು ಕಿಡಿಗೇಡಿಗಳ ಕೃತ್ಯ ಎಂಬುವುದು ಸ್ಪಷ್ಟಗೊಂಡಿದೆ. ಈ ಹಿನ್ನೆಲೆ ಕೃತ್ಯ ನಡೆಸಿರುವ ಕಿಡಿಗೇಡಿಯ ಪತ್ತೆಗೆ ಪೊಲೀಸ್ ಇಲಾಖೆ ಮುಂದಾಗಿದ್ದಾರೆ. ಈ ಘಟನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ವಿಧಿಸುವಂತೆ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ.
ಪ್ರವಾಹ ಸಂದರ್ಭದಲ್ಲೂ ನಕಲಿ ಆದೇಶ:
ಇನ್ನು ಕರಾವಳಿ ಸೇರಿದಂತೆ ಕರ್ನಾಟಕೆದೆಲ್ಲೆಡೆ ಭೀಕರ ನೆರೆ ಎದುರಾದ ಸಂದರ್ಭದಲ್ಲೂ ಇಂತಹದೇ ಘಟನೆ ನಡೆದಿತ್ತು. ಕಿಡಿಗೇಡಿಗಳು ಮಳೆಯಿಂದ ಶಾಲಾ ಕಾಲೇಜುಗಳಿಗೆ ರಝೆ ಘೋಷಣೆ ಎಂದು ಜಿಲ್ಲಾಧಿಕಾರಿಗಳ ಸಹಿಯನ್ನು ನಕಲು ಮಾಡಿದ ಆದೇಶ ಪ್ರತಿಯನ್ನು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡಿದ್ದರು. ಆದರೆ, ಆ ಸಂದರ್ಭದಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ಇಂತಹ ಘಟನೆಗಳು ಪುನರಾವರ್ತನೆಯಾಗಿದೆ.