ಉಳ್ಳಾಲ, ಜ 08 (DaijiworldNews/SM): ಸಿಎಎ-ಎನ್ ಆರ್ ಸಿ ಪರ ಭಿತ್ತಿಪತ್ರ ಹಂಚಲು ತೆರಳಿದ್ದ ಮಂಗಳೂರು ಕ್ಷೇತ್ರ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರನ್ನು ತೊಕ್ಕೊಟ್ಟು ಸ್ಮಾರ್ಟ್ ಸಿಟಿ ವಾಣಿಜ್ಯ ಸಂಕೀರ್ಣದಲ್ಲಿರುವ ಅಂಗಡಿ ಮಾಲೀಕರು ತರಾಟೆಗೆ ತೆಗೆದುಕೊಂಡು, ಬಿಜೆಪಿಗೆ ಧಿಕ್ಕಾರ ಹಾಗೂ ಎನ್ ಆರ್ ಸಿ, ಸಿ ಎಎ ಗೋಬ್ಯಾಕ್ ಎಂದು ಘೋಷಣೆ ಕೂಗಿ ವಾಪಸ್ಸು ಕಳುಹಿಸಿರುವ ಘಟನೆ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಬುಧವಾರ ಸಂಜೆ ವೇಳೆ ನಡೆದಿದೆ.
ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿ ಉಳ್ಳಾಲ ಮತ್ತು ಕೆಎಸ್ ಆರ್ ಪಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಬಿಜೆಪಿ ಮಂಗಳೂರು ಮಂಡಲ ವತಿಯಿಂದ ಸಂಜೆ ಐದು ಗಂಟೆಗೆ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ತಿಳುವಳಿಕೆ ಮೂಡಿಸುವ ಸಲುವಾಗಿ ಭಿತ್ತಿಪತ್ರ ಹಂಚುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕ್ಷೇತ್ರ ಬಿಜೆಪಿ ನಿಯೋಜಿತ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ನಿಕಟಪೂರ್ವ ಅಧ್ಯಕ್ಷ ಸಂತೋಷ್ ಬೋಳಿಯಾರ್ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರ ಸುಮಾರು 50 ಮಂದಿ ಕಾರ್ಯಕರ್ತರು ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಅಂಗಡಿಗಳಲ್ಲಿ ತಿಳುವಳಿಕೆ ಪತ್ರವನ್ನು ಹಂಚಿ, ತೊಕ್ಕೊಟ್ಟು ಸ್ಮಾರ್ಟ್ ಸಿಟಿ ವಾಣಿಜ್ಯ ಸಂಕೀರ್ಣದತ್ತ ಆಗಮಿಸಿದ್ದರು.
ಕಟ್ಟಡದ ಮುಖದ್ವಾರದಲ್ಲಿ ತಡೆಹಿಡಿದ ಅಂಗಡಿ ಮಾಲೀಕರು ಪೌರತ್ವ ತಿಳುವಳಿಕೆಯ ಅಗತ್ಯವಿಲ್ಲ. ದೇಶದ ಮುಸ್ಲಿಮರನ್ನು ಹೊರದಬ್ಬುವ ಕಾರ್ಯ ಬಿಜೆಪಿಯಿಂದ ಆಗುತ್ತಿದೆ. ಈ ನಿಟ್ಟಿನಲ್ಲಿ ಕಾಯಿದೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಯಾವುದೇ ಪತ್ರವನ್ನು ನೀಡದಂತೆ ಬಿಜೆಪಿ ಕಾರ್ಯಕರ್ತರನ್ನು ತರಾಟೆಗೆ ತೆಗದುಕೊಂಡರು. ಈ ವೇಳೆ ಬಿಜೆಪಿ ಕಾರ್ಯಕರ್ತರ ಹಾಗೂ ಅಂಗಡಿ ಮಾಲೀಕರುಗಳ ನಡುವೆ ತೀವ್ರ ವಾಗ್ವಾದ ನಡೆದು, ಅಂಗಡಿ ಮಾಲೀಕರು ಬಿಜೆಪಿಗೆ ಧಿಕ್ಕಾರ ಹಾಗೂ ಗೋಬ್ಯಾಕ್ ಎನ್ ಆರ್ ಸಿ ಘೋಷಣೆಗಳನ್ನು ಕೂಗಿದರು. ಇದರಿಂದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ ಹಿನ್ನೆಲೆಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕಾಗಮಿಸಿದ ಉಳ್ಳಾಲ ಹಾಗೂ ಕೆಎಸ್ ಆರ್ ಪಿ ಪೊಲೀಸರು ಇತ್ತಂಡಗಳ ಮನವೊಲಿಸಿ ಬಿಜೆಪಿ ಕಾರ್ಯಕರ್ತರನ್ನು ವಾಪಸ್ಸು ಕಳುಹಿಸುವ ಮೂಲಕ ವಾತಾವರಣ ತಿಳಿಗೊಳಿಸಿದರು.