ಉಡುಪಿ, ಜ 08 (Daijiworld News/MSP): ಹಲವಾರು ವಿರೋಧ ವಿವಾದಗಳಿಗೆ ಕಾರಣವಾಗಿದ್ದ, ಜ 11ರಂದು ನಡೆಯಬೇಕಾಗಿದ್ದ ಬಿಲ್ಲವ ಮುಸ್ಲಿಂ ಸ್ನೇಹ ಸಮ್ಮೇಳನ ಧಿಡೀರ್ ಎಂದು ಮುಂದೂಡಲಾಗಿದೆ ಈ ಬಗ್ಗೆ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಪ್ರಕಟನೆ ಹೊರಡಿಸಿದ್ದಾರೆ.
"ಬಿಲ್ಲವ ಮುಸ್ಲಿಂ ಸ್ನೇಹ ಸಮಾವೇಶದ ಬಗ್ಗೆ ಗೊಂದಲ ಸೃಷ್ಟಿಸುವ ಪ್ರಯತ್ನದಲ್ಲಿದ್ದು, ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಸಮಾಜ ಮತ್ತು ಸಮುದಾಯದ ಒಳಿತನ್ನು ಬಲಿಕೊಟ್ಟು ಕೀಳುಮಟ್ಟದ ಕುತಂತ್ರಗಳನ್ನು ನಡೆಸುತ್ತಿದ್ದಾರೆ. ಅನಗತ್ಯವಾಗಿ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿ ಸುಳ್ಳು ಸುದ್ದಿ ಹರಿಯಬಿಡಲಾಗುತ್ತಿದೆ. ಸಮಾವೇಶದ ಅತಿಥಿ ಮತ್ತು ಸ್ವಾಗತ ಸಮಿತಿಯ ಸದಸ್ಯರ ಬಗ್ಗೆ ಕೀಳುಮಟ್ಟದ ಅಸಹನೀಯ ಭಾಷೆ ಬಳಸಿ ಅಪಪ್ರಚಾರ ಮಾಡಲಾಗುತ್ತಿದೆ. ಈ ನಡುವೆ ಉದ್ಘಾಟಕರಾಗಿ ಬರಬೇಕಾಗಿದ್ದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಯವರು ಸಮಾವೇಶದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇಂತಹ ಗೊಂದಲ ಪರಿಸ್ಥಿತಿಯಲ್ಲಿ ಜ.11ರಂದು ನಡೆಯಬೇಕಾಗಿದ್ದ ಬಿಲ್ಲವ ಮುಸ್ಲಿಂ ಸ್ನೇಹ ಸಮಾವೇಶ ನಡೆಸುವುದು ಸೂಕ್ತವಲ್ಲ ಎಂದು ಸ್ವಾಗತ ಸಮಿತಿ ನಿರ್ಣಯ ತೆಗೆದುಕೊಂಡಿದೆ. ಶೀಘ್ರವೇ ಹೊಸ ಸಮಿತಿ ರಚಿಸಿ ಸಮಾವೇಶದ ದಿನಾಂಕ ನಿರ್ಧಾರಿಸಲಾಗುವುದು.
ಇನ್ನು ಈ ಸಮಾವೇಶವನ್ನು ಉದ್ಘಾಟಿಸಲಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ನೀಡಿದ ಅಮಂತ್ರಣದ ಅಸಮರ್ಪಕತೆಯ ಬಗ್ಗೆ ವದಂತಿಗಳನ್ನು ಹರಡಲಾಗಿದೆ. ಇದು ಶುದ್ಧ ಸುಳ್ಳು. ಅವರನ್ನು ಕನಿಷ್ಠ ಮೂರು ಬಾರಿ ಸಂಪರ್ಕಿಸಿ. ಒಪ್ಪಿಗೆ ಪಡೆದು. ಅನಂತರ ಕೆಲವೇ ಕೆಲವು ಆಮಂತ್ರಣ ಪತ್ರಿಕೆಯ ಪ್ರತಿಗಳನ್ನು ಮುದ್ರಿಸಿ ನಿಯೋಗವೊ೦ದರ ಮೂಲಕ ಅವರನ್ನು ಭೇಟಿ ಮಾಡಿ ವಿದ್ಯುಕ್ತವಾಗಿ ಆಮಂತ್ರಿಸಲಾಗಿತ್ತು. ಅದನ್ನು ಅವರು ಸಂತೋಷದಿಂದ ಒಪ್ಪಿಕೊಂಡ ಬಳಿಕ ಮರುದಿನ ಜನರನ್ನು ಆಮಂತ್ರಿಸಲಿಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಮಂತ್ರಣ ಪತ್ರಿಕೆ ಮುದ್ರಿಸಿ, ಪ್ರತಿನಿಧಿಗಳ ಮೂಲಕ ವಿತರಿಸಲಾಯಿತು. ಆವರಿಗೆ ಮಾಹಿತಿ ನೀಡದೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ದಾಖಲಿಸಲಾಗಿದೆ ಎಂದು ಹೇಳಿರುವುದು ಸತ್ಯವಲ್ಲ. ಆಮಂತ್ರಣ ನೀಡಲು ಹೋದ ನಿಯೋಗದಲ್ಲಿ ಶ್ರೀ ಬಿ.ಎನ್. ಶಂಕರ ಪೂಜಾರಿ, ಶ್ರೀ ಜನಾರ್ದನ ತೋನ್ತೆ, ಶ್ರೀ ರಾಮ ಪೂಜಾರಿ ಶ್ರೀ ಇದ್ರಿಸ್ ಹೂಡೆ, ಶ್ರೀ ಎಂ.ಎ. ಮೌಲಾ ಉಡುಪಿ, ಶ್ರೀ ಕರಾಮತ್ ಅಲಿ. ಉಡುಪಿ ಮತ್ತು ಶ್ರೀ ಕೋಟಾ ಇಬ್ರಾಹೀಮ್ ಸಾಹೇಬ್ ಒಳಗೊಂಡಿದ್ದರು ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.