ಕುಂದಾಪುರ, ಜ 08 (Daijiworld News/MSP): ಕೇಂದ್ರ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಜನವರಿ 8ರಂದು ನಡೆಸಲು ಕರೆ ನೀಡಲಾದ ರಾಷ್ಟ್ರ ವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕುಂದಾಪುರದಲ್ಲಿ ನೀರಸ ಪ್ರತಿಕ್ರಿಯೆ ದೊರೆತಿದೆ. ರಾಷ್ಟ್ರ ವ್ಯಾಪಿ ಮುಷ್ಕರದ ಪರವಾಗಿ ಎಐಟಿಯುಸಿ, ಸಿಐಟಿಯು, ಬ್ಯಾಂಕ್ ನೌಕರರ ಸಂಘಟನೆ, ವಿಮಾ ಕಂಪೆನಿಯ ನೌಕರರು, ಬಿಎಸ್ಎನ್ನೆಲ್ ಕಾರ್ಮಿಕರ ಸಂಘಟನೆ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟೀ ಸಮಿತಿ ವತಿಯಿಂದ ಜಿಲ್ಲೆಯಲ್ಲಿ ಬೆಂಬಲ ನೀಡಲಾಗಿತ್ತು.
ಅದರಂತೆ ಕಾರ್ಮಿಕ ವರ್ಗ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಆದರೆ, ಬಸ್ ಸಂಚಾರ, ವ್ಯಾಪಾರ ವಹಿವಾಟುಗಳು ಎಂದಿನಂತೆಯೇ ಕಾರ್ಯ ನಿರ್ವಹಿಸಿದವು. ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡದ ಕಾರಣ ಮತ್ತು ಮುಷ್ಕರದಲ್ಲಿ ಭಾಗವಹಿಸಿದ ಕಾರ್ಮಿಕರು ಹಿಂಸಾಚಾರದತ್ತ ಮುಖ ಮಾಡದ ಕಾರಣ ಶಾಲಾ ವಿದ್ಯಾರ್ಥಿ - ವಿದ್ಯಾರ್ಥಿನಿಯರು ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊದರೆಯುಂಟಾಗಲಿಲ್ಲ. ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಲಾಗಿಲ್ಲ. ನಮ್ಮ ಮುಷ್ಕರ ನಮ್ಮ ಸಮಸ್ಯೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತರುವುದು ಮತ್ತು ಅದರ ಅನುಷ್ಟಾನಕ್ಕೆ ಆಗ್ರಹಿಸಿವುದು ಎಂದು ಮುಷ್ಕರ ನಿರತ ಕಾರ್ಮಿಕ ಸಂಘಟನೆಯ ಮುಖಂಡ ಕೆ. ಶಂಕರ್ ಹೇಳಿದ್ದಾರೆ.
ಬೆಳಿಗ್ಗೆ ಹತ್ತು ಗಂಟೆಯ ಸುಮಾರಿಗೆ ಮುಷ್ಕರಕ್ಕೆ ಬೆಂಬಲ ನೀಡಿದ ಕಾರ್ಮಿಕ ಸಂಘಟನೆಯ ಕಾರ್ಯಕರ್ತರು ಕುಂದಾಪುರದಲ್ಲಿ ಜಮಾಯಿಸಿ ಮುಖ್ಯರಸ್ತೆಯಲ್ಲಿ ಶಾಂತಿಯುತ ಮೆರವಣಿಗೆ ನಡೆಸಿದರು. ಇದೇ ಸಂದರ್ಭ ಕಾರ್ಮಿಕರ ಬೇಡಿಕೆಗಳಾದ ಮಾಸಿಕ 21 ಸಾವಿರ ರಾಷ್ಟ್ರೀಯ ಸಮಾನ ಕನಿಷ್ಟ ವೇತನ ನಿಗಧಿ, ಕಾರ್ಮಿಕ ವಿರೋಧಿ ಕಾನೂನುಗಳ ಸಂಹಿತೀಕರ ವಾಪಾಸಾತಿ, ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯಗಳ ಸ್ಥಾಪನೆ, ಸರ್ಕಾರದಿಂದಲೇ 10 ಸಾವಿರ ಕನಿಷ್ಟ ಖಾತ್ರಿ ಪಿಂಚಣಿ, ಆರ್ಥಿಕ ಹಿಂಜರಿತಕ್ಕೆ ಕಾರಣವಾದ ನೀತಿಗಳು ಮತ್ತು ಕಾರ್ಮಿಕರ ಉದ್ಯೋಗ ಹಾಗೂ ಆದಾಯ ರಕ್ಷಣೆ ಮತ್ತು ಉದ್ಯೋಗ ಸೃಷ್ಟಿ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಸರ್ಕಾರಗಳ ಅನುದಾನ ಮತ್ತು ಶಾಸನಬದ್ಧ ಭವಿಷ್ಯನಿಧಿ ಮತ್ತು ಪಿಂಚಣಿ, ಸಾರ್ವತ್ರಿಕ ಪಡಿತರ ವ್ಯವಸ್ಥೆ, ಡಾ. ಸ್ವಾಮಿನಾಥನ್ ವರದಿ ಅನುಷ್ಠಾನ, ಗುತ್ತಿಗೆ ಪದ್ಧತಿ ರದ್ಧತಿ, ಸಮಾನ ಕೆಲಸ ಸಮಾನ ವೇತನ, ಷೇರು ವಿಕ್ರಯ ಹಾಗೂ ಖಾಸಗೀಕರಣ ವಿರೋಧಿಸಿ, ಐಎಲ್ಸಿ ತೀರ್ಮಾನಗಳ ಜ್ಯಾರೊಗೊಳಿಸುವುದು, ಬ್ಯಾಂಕ್ಗಳ ವಿಲೀನ ಮಾಡಬಾರದು, ಹೆದ್ದಾರಿ ಪೂರ್ಣಗೊಳಿಸಿದ ಬಳಿಕ ಟೋಲ್ ಸಂಗ್ರಹ, ನಿವೇಶನರಹಿತರಿಗೆ ಭೂಮಿ, ಸಣ್ಣ ಹಿಡುವಳಿದಾರರ ರಕ್ಷಣೆ, ಯೋಗ್ಯ ಬೆಲೆಗೆ ಭೂಮಿ ಹಕ್ಕುಪತ್ರ, ಸಮರ್ಪಕ ಮರಳು ಪೂರೈಸಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯನ್ನು ಕೇಂದ್ರಕ್ಕೆ ವರ್ಗಾಯಿಸಬಾರದು ಎನ್ನುವ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು. ಕಾರ್ಮಿಕ ಸಂಘಟನೆಗಳ ಜಂಟೀ ಸಮಿತಿ ಸಂಚಾಲಕ ಕೆ. ಶಂಕರ್, ಹಾಗೂ ಸಹ ಸಂಚಾಲಕ ಕೆವಿ ಭಟ್ ನೇತೃತ್ವದಲ್ಲಿ ಮುಷ್ಕರ ನಡೆಯಿತು. ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.