ಮಂಗಳೂರು, ಜ 07 (DaijiworldNews/SM): ನಗರದ ಬೊಂದೇಲ್ನಲ್ಲಿರುವ ಸಂತ ಲಾರೆನ್ಸರ ಚರ್ಚ್ ಮತ್ತು ಪುಣ್ಯ ಕ್ಷೇತ್ರ, ಚರ್ಚ್ ಪಾಲನಾ ಸಮಿತಿ ಬೊಂದೇಲ್ ಮತ್ತು ಶ್ರೀ ಶಾರದಾ ಮಾತಾ ಭಜನಾ ಮಂಡಳಿ ವೈದ್ಯನಾಥ ನಗರ ಪಚ್ಚನಾಡಿ ಇವರ ಅಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗದ ಸಹಯೋಗದಲ್ಲಿ ಬೊಂದೇಲ್ ಚರ್ಚ್ ಆವರಣದಲ್ಲಿ ಆಧಾರ್ ನೋಂದಣಿ ಮತ್ತು ಪರಿಷ್ಕರಣಾ ಶಿಬಿರಕ್ಕೆ ಮಂಗಳವಾರದಂದು ಚಾಲನೆ ನೀಡಲಾಯಿತು.
ಚರ್ಚಿನ ಧರ್ಮಗುರು ಫಾ. ಆಂಡ್ರೂ ಲಿಯೋ ಡಿ ಸೋಜಾ ಶಿಬಿರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಆಧಾರ್ ಕಾರ್ಡ್ಗೆ ಇರುವ ಮಹತ್ವವನ್ನು ವಿವರಿಸಿದರು. ಇದು ಅತ್ಯುತ್ತವಾದ ಶಿಬಿರವಾಗಿದ್ದು, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ನಾವೆಲ್ಲರೂ ಭಾರತೀಯರು ಎಂಬುವುದಕ್ಕೆ ನಮ್ಮ ದಾಖಲೆಗಳು. ನಮ್ಮ ದಾಖಲೆಗಳು ಸರಿಯಾಗಿದ್ದರೆ ಉಳಿದ ಎಲ್ಲಾ ಕೆಲಸ ಕಾರ್ಯಗಳೂ ಸರಿಯಾಗಿರುತ್ತದೆ. ಹೀಗಾಗಿ ನಾವು ನಮ್ಮ ದಾಖಲೆ ಪತ್ರಗಳನ್ನು ಸರಿಯಾಗಿಟ್ಟುಕೊಳ್ಳಲು ಉತ್ತಮ ಅವಕಾಶವಿದ್ದು, ಈ ಶಿಬಿರವನ್ನು ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ಈಸ್ಟ್ ಡಿವಿಜನ್ ಸಹಾಯಕ ಅಂಚೆ ಅಧೀಕ್ಷಕ ಮಹೇಶ್ ಒ, ಮಂಗಳೂರು ವಿಭಾಗದ ಅಂಚೆ ಇಲಾಖೆ ಸಹಾಯಕ ಅಂಚೆ ಅಧೀಕ್ಷಕ ಗ್ರೆಗೊರಿ ನೊರೊನ್ಹಾ, ಚರ್ಚಿನ ಪಾಲನಾ ಸಮಿತಿ ಉಪಾಧ್ಯಕ್ಷ ರೆಜಿನಾಲ್ಡ್ ಡಿ ಸೋಜಾ, ಪಾಲನಾ ಸಮಿತಿ ಮಾಜಿ ಉಪಾಧ್ಯಕ್ಷ ಎನ್ಬರ್ಟ್ ಪಿಂಟೋ, ಪಚ್ಚನಾಡಿ ಕಾರ್ಪೋರೇಟರ್ ಸಂಗೀತ ಆರ್ ನಾಯಕ್, ಸಮಾಜ ಸೇವಕ ಸಂದೀಪ್ ಬೊಂದೇಲ್, ಶಾರದಾ ಮಾತಾ ಭಜನಾ ಮಂಡಳಿಯ ಸದಸ್ಯರಾದ ಪಿ ವಿ ಉತ್ತಯ್ಯ, ಲತೀಶ್ ರೈ, ವಿಜಯ, ಬೊಂದೇಲ್ ಅಂಚೆಕಚೇರಿ ಪಾಲಕಿ ಮೀನಾಕ್ಷಿ ಮೊದಲಾದವರಿದ್ದರು.
ಗ್ರಾಮೀಣ ಅಂಚೆ ನೌಕರ ಗಂಗಾಧರ ಕಾರ್ಯಕ್ರಮವನ್ನು ನಿರೂಪಿಸಿದರು. ನೂರಾರು ಮಂದಿ ಆಗಮಿಸಿ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಈ ಶಿಬಿರವು ಬುಧವಾರ ಕೂಡಾ ನಡೆಯಲಿದೆ.