ಉಡುಪಿ, ಜ 07 (DaijiworldNews/SM): ಉಡುಪಿಯ ಪರ್ಯಾಯವನ್ನು ಯಾವುದೇ ಲೋಪ ದೋಷವಿಲ್ಲದೇ ನಾಡಹಬ್ಬದಂತೆ ವಿಜೃಂಭಣೆಯಿಂದ ನಡೆಸಬೇಕು ಹಾಗೂ ಉಡುಪಿಯ ಪರ್ಯಾಯದಲ್ಲಿ ಭಾಗಿಯಾಗಲು ಹೊರ ಜಿಲ್ಲೆಯಿಂದ ಸಾಗರೋಪಾದಿಯಲ್ಲಿ ಬರುವ ಭಕ್ತರಿಗೆ ಹಾಗೂ ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ತೊಂದರೆಗಳಾಗದಂತೆ ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ, ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಅವರು ಮಂಗಳವಾರ ಉಡುಪಿಯ ಕೃಷ್ಣ ಮಠದ ಅಥಿತಿ ಗೃಹದಲ್ಲಿ ನಡೆದ ಪರ್ಯಾಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ಪರ್ಯಾಯಕ್ಕೆ ರಾಜ್ಯ ಸರ್ಕಾರದ ವತಿಯಿಂದ 3 ಕೋಟಿ, ಜಿಲ್ಲಾಡಳಿತ, ನಗರ ಸಭೆ ಸೇರಿದಂತೆ ಒಟ್ಟು 11 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿದೆ. ಯಾವುದೇ ಕುಂದು ಕೊರತೆ ಬಾರದಂತೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು. ದೊಡ್ಡ ಪ್ರಮಾಣದಲ್ಲಿ ಅಗಮಿಸುವ ಭಕ್ತಾಧಿಗಳಿಗೆ ವಸತಿ, ಕುಡಿಯುವ ನೀರು, ಶೌಚಾಲಯ, ಹಾಗೂ ಸಂಚಾರ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ಒದಗಿಸಬೇಕು. ಪರ್ಯಾಯಕ್ಕೆ ಪೂರಕವಾಗಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯಿಂದ ಕೆಲಸಗಳನ್ನು ನಿರ್ವಹಿಸಿ ಪರ್ಯಾಯವನ್ನು ಯಶಸ್ವಿಯಾಗಿಸಬೇಕು ಎಂದು ಹೇಳಿದರು.
ಶಾಸಕ ರಘಪತಿ ಭಟ್ ಮಾತನಾಡಿ, ಜನವರಿ 8 ಬುಧವಾರದಂದು ಮಧ್ಯಾಹ್ನ 2 ಗಂಟೆಗೆ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಜೋಡುಕಟ್ಟೆಯಿಂದ ಮೆರವಣಿಗೆಯೊಂದಿಗೆ ಪುರ ಪ್ರವೇಶಿಸಲಿದ್ದಾರೆ. ರಾತ್ರಿ 8 ಗಂಟೆಗೆ ರಥಬೀದಿಯಲ್ಲಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಗೆ ಪಲಿಮಾರು ಮಠದ ಪರ್ಯಾಯ ಶ್ರೀ ವಿದ್ಯಾತೀರ್ಥ ಶ್ರೀಪಾದರಿಂದ ಪೌರ ಸನ್ಮಾನ ನೆರವೇರುವುದು. ಇದೇ ಮೊದಲ ಬಾರಿಗೆ ಜನವರಿ 15ರಂದು ಅದಮಾರು ಮಠ ಮತ್ತು ಮಲ್ಪೆ ಭಾಗದಿಂದ ಮಾತ್ರ ಹೊರ ಕಾಣಿಕೆ ಸ್ವೀಕರಿಸಲಾಗುವುದು ಎಂದಿದ್ದಾರೆ.
ಪರ್ಯಾಯದ ಬಳಿಕ ಪ್ರತೀ 15 ದಿನಗಳಿಗೊಮ್ಮೆ ಹೊರಕಾಣಿಕೆಗಳನ್ನು ಸ್ವೀಕರಿಸಲಾಗುವುದು ಎಂದು ಹೇಳಿದರು. ಜನವರಿ 18ರಂದು ಬೆಳಗ್ಗಿನ ಜಾವ 2 ಗಂಟೆಗೆ ಪರ್ಯಾಯ ಮೆರವಣಿಗೆ ಆರಂಭವಾಗಲಿದೆ. ಮಧ್ಯಾಹ್ನ 2.30 ಗಂಟೆಗೆ ಸರಿಯಾಗಿ ಪರ್ಯಾಯ ದರ್ಬಾರನ್ನು ಆಯೋಜಿಸಲಾಗಿದ್ದು, ದರ್ಬಾರಿನ ಅಧ್ಯಕ್ಷತೆಯನ್ನು ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ವಹಿಸಲಿದ್ದು, ಮುಖ್ಯಮಂತ್ರಿಗಳು, ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಜನವರಿ 18 ರಿಂದ 22 ವರೆಗೆ ವಿಶೇಷ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯುತ್ತದೆ. ಈ ಬಾರಿಯ ಪರ್ಯಾಯದಲ್ಲಿ ಪರಿಸರ ಸ್ನೇಹಿ ಬ್ಯಾನರ್ ಗಳನ್ನು ಬಳಸಲಾಗಿರುವುದು ವಿಶೇಷ ಎಂದು ಹೇಳಿದರು.