Karavali
ಮಂಗಳೂರು: ಪೋಷಕರೇ ಎಚ್ಚರ..! ಡ್ರಗ್ಸ್ ಮಾಫಿಯಾದ ಹೊಸ ಮುಖ - 'ವಿದ್ಯಾರ್ಥಿನಿ'ಯರೇ ಟಾರ್ಗೆಟ್
- Tue, Jan 07 2020 04:40:17 PM
-
ಮಂಗಳೂರು, ಜ 7(Daijiworld News/SB): ಇತ್ತೀಚಿಗಿನ ಕೆಲ ವರ್ಷಗಳಿಂದ ಮಂಗಳೂರು ನಗರವೂ ಅಪರಾಧ ಪಟ್ಟಿಯಲ್ಲಿ ಡ್ರಗ್ಸ್ ವ್ಯವಹಾರ ಹಾಗೂ ಪೂರಕ ಅಪರಾಧಗಳಿಂದ ಅಗ್ರಸ್ಥಾನದಲ್ಲಿವೆ. ಸರಕಾರ, ಪೋಲಿಸ್ ಇಲಾಖೆ ಹಾಗೂ ಸರಕಾರೇತರ ಸಂಸ್ಥೆಗಳು ಡ್ರಗ್ಸ್ ಹಾಗೂ ಇತರ ಮಾದಕ ವಸ್ತುಗಳಿಂದಾಗುವ ಅನಾಹುತ ಹಾಗೂ ಮಾರಾಟದ ವಿರುದ್ಧ ನಿರಂತರ ಜನಜಾಗೃತಿಯಲ್ಲಿ ತೊಡಗಿದ್ದರಿಂದ ಕೆಲ ತಿಂಗಳುಗಳಿಂದ ನಗರದ ಡ್ರಗ್ಸ್ ಮಾಫಿಯಾಕ್ಕೆ ಸಣ್ಣ ಮಟ್ಟದ ಹಿನ್ನಡೆಯಾಗಿತ್ತು. ಇದರೊಂದಿಗೆ ಪೋಲಿಸ್ ಇಲಾಖೆಯು ಡ್ರಗ್ಸ್ ಮಾರಾಟಗಾರರ ಹಾಗೂ ಅಮಲು ಪದಾರ್ಥಗಳನ್ನು ದಂಧೆಕೋರರ ಬಗ್ಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಆರಂಭಿಸಿದ್ದರಿಂದ ಡ್ರಗ್ಸ್ ಮಾಫಿಯಾ ತನ್ನ ವ್ಯವಹಾರ ಕುದುರಿಸಲು ಬೇರೆ ದಾರಿಗಳನ್ನು ಹುಡುಕಲು ಆರಂಭಿಸಿದೆ ಎನ್ನುವುದು ಬೆಳಕಿಗೆ ಬಂದಿದೆ.
ಬಲ್ಲ ಮೂಲಗಳ ಪ್ರಕಾರ ಇದೀಗ ನಗರದ ಕಾಲೇಜಿನ ವಿದ್ಯಾರ್ಥಿಗಳ ಬದಲು ವಿದ್ಯಾರ್ಥಿನಿಯರನ್ನು ಉಪಯೋಗಿಸಿ ಡ್ರಗ್ಸ್ ಮಾಫಿಯಾ ತನ್ನ ವ್ಯವಹಾರವನ್ನು ವಿಸ್ತರಿಸಲು ಹೊರಟಿದೆ ಎಂಬ ಅಘಾತಕಾರಿ ಮಾಹಿತಿ ಹೊರಬಿದ್ದಿದೆ.
ನಗರಾದ್ಯಂತ ಡ್ರಗ್ಸ್ ಹಾಗೂ ಮಾದಕ ವಸ್ತುಗಳನ್ನು ಸುಲಭ ಸಾಗಾಣಿಕೆಗೆ ಹಾಗೂ ಕಾಲೇಜು ಕ್ಯಾಂಪಸ್ ಗಳಿಗೆ ಅಡೆತಡೆಗಳಿಲ್ಲದೆ ಇದನ್ನು ರವಾನಿಸಿ ತಮ್ಮ ಮಾಫಿಯಾ ವಿಸ್ತರಿಸುವ ಉದ್ದೇದಿಂದ ವಿದ್ಯಾರ್ಥಿನಿಯರನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸುತ್ತಿರುವುದು ಬಯಲಿಗೆ ಬಂದಿದೆ. . ಮಾದಕ ದೃವ್ಯಗಳ ಸಾಗಣಿಕೆ ಹೊರತಂತೆ ವಿದ್ಯಾರ್ಥಿನಿಗಳನ್ನು ಲೈಂಗಿಕವಾಗಿ ಬಳಸಿಕೊಂಡು ಗ್ರಾಹಕರನ್ನು ಆಕರ್ಷಿಸುವ ಉದ್ದೇಶವೂ ಈ ಮಾಫಿಯಾ ಹಿಂದೆ ಅಡಗಿದೆ ಎಂಬ ಅನುಮಾನವಿದೆ.
ಪ್ರಾದಾನ್ಯ (ಹೆಸರು ಬದಲಿಸಲಾಗಿದೆ) ನಗರದ ಪ್ರತಿಷ್ಟಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯಾಗಿದ್ದು ಕೆಲ ವಾರಗಳ ಹಿಂದೆ ತೀವ್ರ ಹೊಟ್ಟೆನೋವಿನಿಂದ ಒಮ್ಮಿಂದೊಮ್ಮೆಲೆ ವಾಂತಿ ಮಾಡಲು ಪ್ರಾರಂಭಿಸಿದಳು. ಅರೋಗ್ಯ ತಪಾಸಣೆಗೆಂದು ಪೋಷಕರು ಆಕೆಯೊಂದಿಗೆ ಹತ್ತಿರದ ಆಸ್ಪತ್ರೆಗೆತೆರಳಿದ ವೇಳೆ ವೈದ್ಯರು ಆಕೆಯನ್ನು ಎರಡು ತಿಂಗಳ ಗರ್ಭಿಣಿಯೆಂದು ದೃಢೀಕರಿಸಿದಾಗ ಹೆತ್ತವರು ಗರಬಡಿದವರಂತಾದರು.
ತಿಂಗಳುಗಳ ಹಿಂದೆ ಆಕೆ ಕೆಲ ಕಾಲೇಜು ಗೆಳೆಯರೊಂದಿಗೆ ಬರ್ತ್ ಡೇ ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದು ವಿಚಾರಣೆ ವೇಳೆ ಬೆಳಕಿಗೆ ಬಂತು. ಪಾರ್ಟಿ ತಡ ರಾತ್ರಿಯವರೆಗೆ ಮುಂದುವರಿದಿದ್ದರಿಂದ ಆಕೆಯು ಇತರ ಗೆಳೆಯ ಗೆಳೆತಿಯರೊಂದಿಗೆ ಅಲ್ಲೇ ತಂಗುವಂತಹ ಸಂದರ್ಭ ಬಂದಿತ್ತು. ಈ ನಡುವೆ ಕೆಲ ಸ್ನೇಹಿತರು ಕೆಲ ತಂಪುಪಾನೀಯಗಳನ್ನು ಆಕೆಗೆ ನೀಡಿದ್ದರು. ಇದನ್ನು ಸೇವಿಸಿದ ಆಕೆಯು ಕೆಲ ಗಂಟೆಗಳ ಮದೋನ್ಮತಳಾಗಿದ್ದು ಈ ಸಂದರ್ಭ ಆಕೆಯ ಮೇಲೆ ಗೆಳೆಯರು ಅತ್ಯಾಚಾರವೆಸಗಿದ್ದರು.
ಆದರೆ ಪಾನೀಯದ ಮೂಲಕ ಮಾದಕ ಪದಾರ್ಥ ದೇಹದ ಒಳಗೆ ಸೇರಿದ್ದರಿಂದ ತನ್ನ ಮೇಲೆ ಲೈಂಗಿಕ ದಬ್ಬಾಳಿಕೆ ನಡೆಯುತ್ತಿದೆ ಎಂದು ಅಂದಾಜಿಸಲು ಆಕೆಗೆ ಸಾಧ್ಯವಾಗಲಿಲ್ಲ. ಮಾತ್ರವಲ್ಲದೇ ಪ್ರಜ್ಞಾ ಸ್ಥಿತಿಯಲ್ಲಿದ್ದರೂ ಆ ವೇಳೆ ತನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಅರಿವಿರುವ ಪರಿಸ್ಥಿತಿಯಲ್ಲಿರಲಿಲ್ಲ.
ಇದು ವಿದ್ಯಾರ್ಥಿಗಳನ್ನು , ಯುವಕರನ್ನು ಗ್ರಾಹಕರನ್ನಾಗಿಸಲು ಡ್ರಗ್ಸ್ ಮಾಫಿಯಾ ಉಪಯೋಗಿಸುವ ಹೊಸ ವಿಧಾನ. ಹೆಚ್ಚಿನ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಅರಿವಿಗೆ ಬಾರದೇ ತಡರಾತ್ರಿವರೆಗೆ ನಡೆಯುವ ಬರ್ತ್ ಡೇ ಪಾರ್ಟಿ, ಸಕ್ಸಸ್ ಪಾರ್ಟಿ, ಬ್ಯಾಚುಲರ್ ಪಾರ್ಟಿಗಳಲ್ಲಿ ಡ್ರಗ್ ಮಾಫಿಯಾ ನುಸುಳಿಕೊಂಡು ತನ್ನ ವ್ಯವಹಾರ ಕುದುರಿಸುತ್ತಿದೆ. ಈ ಹೊರತಾಗಿ ಪ್ರೀತಿಯ ನಾಟಕವಾಡಿ ವಿದ್ಯಾರ್ಥಿ - ವಿದ್ಯಾರ್ಥಿನಿಯರನ್ನು ಮಾದಕ ವ್ಯವಹಾರಗಳ ಬಲೆಗೆ ಬೀಳಿಸುವ ಕೆಲಸವು ನಡೆಯುತ್ತಿದೆ.
ದೂರದ ಗೋವಾ ಹಾಗೂ ಬೆಂಗಳೂರು ಕೇಂದ್ರಗಳಿಂದ ಡ್ರಗ್ ಪದಾರ್ಥಗಳನ್ನು ನಗರಕ್ಕೆ ಕೊಂಡುಬರಲು ವಿದ್ಯಾರ್ಥಿನಿಯರನ್ನು ಉಪಯೋಗಿಸುವ ಡ್ರಗ್ಸ್ ವ್ಯವಹಾರದ ತಂಡಗಳು ನಗರದಲ್ಲಿ ಸಕ್ರೀಯವಾಗಿ ಕಾರ್ಯಚರಿಸುತ್ತದೆ ಎಂಬ ಮಾಹಿತಿಯೂ ಹೊರಬಿದ್ದಿದೆ. " ಹ್ಯಾಪಿನೆಸ್ ಟೂರ್ " ಎಂಬ ಹೆಸರಿನಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಖಾಸಗಿ ಸಂಸ್ಥೆಗಳ ಯುವ ಉಧ್ಯೋಗಿಗಳು ನಡೆಸುವ ಬೆಂಗಳೂರು ಹಾಗೂ ಗೋವಾ ಪ್ರವಾಸಗಳಲ್ಲೂ ಮಾದಕ ವಸ್ತುಗಳ ಸಾಗಾಟಗಾರರು ನುಸುಳಿಕೊಂಡು ಈ ತಂಡಗಳ ಮೂಲಕ ಮಾದಕ ದೃವ್ಯಗಳನ್ನು ನಗರಕ್ಕೆ ಆಮದು ಮಾಡಿಕೊಳ್ಳುತ್ತಿವೆ. ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಇರುವ ಕಾರಣ ಪೊಲೀಸ್ ತಪಾಸಣೆ ಎದುರಿಸಬೇಕಾಗುವುದಿಲ್ಲ ಎಂಬ ಮನೋಭಾವವೇ ಇದರ ಹಿಂದಿನ ಪ್ರೇರಣೆ ಎನ್ನಲಾಗುತ್ತಿದೆ.
ನಗರದ ಪ್ರಮುಖ ಅಮಲು ಪದಾರ್ಥ ವ್ಯರ್ಜನ ಕೇಂದ್ರವಾದ ”ಡಿ ಲಿಂಕ್ ’ ಇದರ ಸ್ವಯಂ ಸೇವಕರು ಹೇಳುವಂತೆ ನಗರದಲ್ಲಿ ನೂರಕ್ಕೆ ಹದಿನಾರರಿರಿಂದ ಇಪ್ಪತ್ತು ವಿದ್ಯಾರ್ಥಿಗಳು ಡ್ರಗ್ಸ್ ಉತ್ಪನ್ನಗಳನ್ನು ಸೇವಿಸುತ್ತಾರೆ. ಪ್ರಸ್ತುತ ಡ್ರಗ್ಸ್ ವಿತರಕರು ರಾತ್ರಿ ವೇಳೆಗಳಲ್ಲಿ ನಡೆಯುವ ನಶಾ ಪಾರ್ಟಿಗಳನ್ನು ತಮ್ಮ ವ್ಯವಹಾರಕ್ಕಾಗಿ ಉಪಯೋಗಿಸುತ್ತಾರೆ. ಹೊಸ ಗ್ರಾಹಕರನ್ನು ಕಂಡು ಹಿಡಿಯುವುದರ ಜೊತೆಗೆ ವಿದ್ಯಾರ್ಥಿಗಳನ್ನು ಲೈಂಗಿಕವಾಗಿ ಬಳಸುವುದು ಇವರ ಪ್ರಮುಖ ಉದ್ದೇಶವಾಗಿದೆ.
ಡ್ರಗ್ಸ್ ಮಾಫಿಯಾ ಬಳಿ ದೊರೆಯುವ "ಮಾತ್ರೆ"ಯೊಂದು ತಡರಾತ್ರಿ ಪಾರ್ಟಿಗಳಲ್ಲಿ ವ್ಯಾಪಕ ಬಳಕೆಯಾಗುತ್ತಿದೆ. ಪಾನೀಯಗಳಲ್ಲಿ ಬೆರೆಸಿ ವಿದ್ಯಾರ್ಥಿನಿಯರಿಗೆ ಅರಿಯದಂತೆ ಈ ಮಾತ್ರೆಯನ್ನು ನೀಡಲಾಗುತ್ತಿದೆ. ಮಾತ್ರೆ ಬೆರೆಸಿದ ಪಾನೀಯ ಸೇವಿಸಿದ ನಂತರ ಎರಡು ಗಂಟೆಗಳ ವರೆಗೆ ಇದನ್ನು ಸೇವಿಸಿದ ವ್ಯಕ್ತಿ ಮದೋನ್ಮತ್ತನಾಗುತ್ತಾನೆ. ಆ ನಂತರ ದೇಹದ ಮೇಲೆ ನಡೆಯುವ ಯಾವುದೇ ಕ್ರಿಯೆ ಆತನ/ಆತಳ ಅರಿವಿಗೆ ಬರುವುದಿಲ್ಲ.
ಹೀಗೆ ನಶಾ ಪಾರ್ಟಿಗಳಲ್ಲಿ ವ್ಯಾಪಕವಾಗಿ ಈ ಅಮಲು ಮಾತ್ರೆಯ ಮೂಲಕ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಶೋಷಣೆ ನಡೆಸಲಾಗುತ್ತಿದೆ.
“ಮಾದಕ ದ್ರವ್ಯಗಳ ಸೇವನೆ ವಿರುದ್ಧ ಹಾಗೂ ಡ್ರಗ್ಸ್ ಮಾಫಿಯಾ ವಿರುದ್ಧ ನಾವು ಸಂದರ್ಭೋಚಿತವಾಗಿ ವಿದ್ಯಾರ್ಥಿಗಳಿಗೆ ಜಾಗೃತಿಯನ್ನು ನೀಡುತ್ತಿದ್ದೇವೆ. ವಿದ್ಯಾರ್ಥಿಗಳು ಡ್ರಗ್ಸ್ ಉಪಯೋಗಿಸುತ್ತಿದ್ದಾರೆ ಎಂಬ ಅನುಮಾನ ಬಂದ ತಕ್ಷಣ ನಾವು ಅವರ ಹೆತ್ತವರನ್ನು ಕರೆಸಿ ಜಾಗಾರೂಕರಾಗಲು ತಿಳಿಸುತ್ತೇವೆ. ಆದರೆ ಹೆಚ್ಚಿನ ಪೋಷಕರು ತಮ್ಮ ಮಕ್ಕಳು ಅಮಲು ಪದಾರ್ಥ ಸೇವಿಸುತ್ತಾರೆ ಎಂಬುದನ್ನು ಒಪ್ಪಿಕೊಳ್ಳಲು ತಯಾರಾಗುವುದಿಲ್ಲ. ಇದು ಕೆಲವೊಮ್ಮೆ ಮಾದಕ ವಸ್ತುಗಳ ವಿರುದ್ಧ ವಿಧ್ಯಾರ್ಥಿಗಳನ್ನು ಜಾಗೃತಗೊಳಿಸಲು ಹಿನ್ನಡೆಯನ್ನುಂಟುಮಾಡುತ್ತದೆ. “ ಎನ್ನುತ್ತಾರೆ ನಗರದ ಕಾಲೇಜೊಂದರ ಪ್ರಾದ್ಯಾಪಕರು.
ಪೋಲಿಸರು ನಿರಂತರ ಮಾದಕ ವಸ್ತುಗಳ ಮಾರಾಟಗಾರರ ಬಲೆಗೆ ಕೆಡವುತ್ತಾರೆ. ಆದರೆ ಶಿಕ್ಷಣ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳು ಈ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಜಾಗೃತಿ ಮೂಡಿಸಬೇಕಾಗಿದೆ. ಡ್ರಗ್ ಮಾಫಿಯಾ ವ್ಯವಹಾರ ಕುದುರಿಸಲು ಹೊಸ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಂತೆ ಪೋಷಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ. ಇದೆಲ್ಲರ ಹೊರತಾಗಿ ಮಾದಕ ವಸ್ತುಗಳನ್ನು ಉಪಯೋಗಿಸುವ ತಂಡಗಳ ಸಂಪರ್ಕಕ್ಕೆ ಬಾರದಂತೆ ಹಾಗೂ ಅವರು ಹೆಣೆದ ಬಲೆಗೆ ಬೀಳದಂತೆ ವಿದ್ಯಾರ್ಥಿಗಳು ಸ್ವಯಂ ಜಾಗರೂಕರಾಗಬೇಕಾಗಿದೆ.