ಉಡುಪಿ, ಜ 7 (Daijiworld News/MB) : ಜಿಲ್ಲಾ ಉತ್ಸವದ ಅಂಗವಾಗಿ ಕಾಪು ಲೈಟ್ ಹೌಸ್ನಲ್ಲಿ ಇದೇ ಮೊದಲ ಬಾರಿಗೆ ಲೈಟ್ ಹೌಸ್ ಉತ್ಸವವನ್ನು ಏರ್ಪಡಿಸಲು ನಿರ್ಧರಿಸಲಾಗಿದೆ.
ಸೋಮವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಈ ಸಂಬಂಧ ಜಿಲ್ಲಾಧಿಕಾರಿ ಜಿ. ಜಗದೀಶ್ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು ಈ ಉತ್ಸವದ ಆಂಗವಾಗಿ ವಿವಿಧ ಕಾರ್ಯಕ್ರಮಗಳ ವಿವರಗಳ ಕುರಿತು ಚರ್ಚೆ ನಡೆಸಿದರು.
ಕಾಪು ಲೈಟ್ ಹೌಸ್ಗೆ ವಿದ್ಯುತ್ ಬೆಳಕಿನ ಅಲಂಕಾರ ಹಾಗೂ ಸಂಗೀತ ಪ್ರದರ್ಶನ, ಮತ್ತು ವಿವಿಧ ಶೈಲಿಯ ಸಾಂಸ್ಕ್ರತಿಕ ಕಾರ್ಯಕ್ರಮಗಳು, ಸ್ಥಳೀಯ ಗುರುತಿಸಲ್ಪಟ್ಟ ಕಲಾವಿದರಿಂದ ಕಾರ್ಯಕ್ರಮಗಳು, ಸ್ಥಳೀಯ ಮೀನುಗಾರರಿಂದ ಬೋಟ್ ರೇಸ್, ಗಾಳಿಪಟ ಉತ್ಸವ, ಬೀಚ್ ಯೋಗಾಸನ ಕಾರ್ಯಕ್ರಮ, ಆಹಾರ ಮಳಿಗೆ ಹಾಗೂ ಇತರೆ ಕರಕುಶಲ ಮಳಿಗೆ ಸ್ಥಾಪನೆ, ವೈನ್ ಉತ್ಸವ, ಸರ್ಫಿಂಗ್, ವಿವಿಧ ಆಟೋಟ ಸ್ವರ್ಧೆಗಳು ಮತ್ತು ಬೀಚ್ ಮ್ಯಾರಥಾನ್ ಕಾರ್ಯಕ್ರಮ, ಪೋಟೋಗ್ರಾಫ್ ಮತ್ತು ವಿಡಿಯೋ ಸ್ಪರ್ದೆ, ಕಾಪು ಬೀಚ್ನ ಪ್ರತಿಬಿಂಬಿಸುವ ಚಿತ್ರಕಲೆ ಮತ್ತು ಕಲಾಶಿಬಿರ, ಗೂಡುದೀಪ ಸ್ವರ್ಧೆ, ಸೆಲ್ಪಿ ಪಾಯಿಂಟ್ಸ್, ಟ್ಯಾಟೂ, ಸ್ಟ್ರಿಟ್ ಫ್ಲೇ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ರೂಪುರೇಷೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದ ದಿನಾಂಕ ನಿಗದಿ ಹಾಗೂ ಇನ್ನಷ್ಟು ಸಿದ್ಧತೆ ಮಾಡಿಕೊಳ್ಳಲು ಕಾಪುವಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್, ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರವಾಸೋದ್ಯಮ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು