ಬಂಟ್ವಾಳ, ಜ 06 (DaijiworldNews/SM): ವಿದೇಶದಲ್ಲಿದ್ದು ಪ್ರಧಾನಿ ನರೇಂದ್ರಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರು ಓರ್ವನನ್ನು ವಶಕ್ಕೆ ಪಡೆದುಕೊಂಡ ಘಟನೆ ಸೋಮವಾರ ಸಂಜೆ ನಡೆದಿದೆ.
ಪೆರುವಾಯಿ ಗ್ರಾಮದ ಸೇನೆರಪಾಲು ನಿವಾಸಿ ಅದ್ರಾಮ ಅವರ ಪುತ್ರ ಅನ್ವರ್ ಎಂಬಾತ ಆರೋಪಿಯಾಗಿದ್ದು, ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಅವರ ನೇತ್ರತ್ವದಲ್ಲಿ ವಿಟ್ಲ ಎಸ್.ಐ.ವಿನೋದ್ ಅವರ ತಂಡ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಅನ್ವರ್ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದು ಅಲ್ಲಿದ್ದುಕೊಂಡೆ ಪೌರತ್ವ ಕಾಯಿದೆ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಿ ಸಂದೇಶ ಗಳನ್ನು ರವಾನೆ ಮಾಡುತ್ತಿದ್ದ. ಜೊತೆಗೆ ಕೋಮು ಭಾವನೆ ಕೆರಳಿಸಿ ಸಂದೇಶಗಳನ್ನು ರವಾನಿಸುತ್ತಿದ್ದ. ಈತನು ಕಳುಹಿಸಿದ ಸಂದೇಶಗಳು ಸಾಕಷ್ಟು ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿದಾಡಿದ್ದು ಪೊಲೀಸರಿಗೆ ಕಿರಿಕ್ ಉಂಟು ಮಾಡಿತ್ತು. ಸಂದೇಶ ಕಳುಹಿಸಿದ ಬಳಿಕ ವಿದೇಶದಿಂದ ತವರೂರಿಗೆ ವಾಪಾಸದ ಅನ್ವರ್ ಅವರನ್ನು ದೂರಿನ ಮೇರೆಗೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯ ವಿವರ:
ಧರ್ಮದ ಬಗ್ಗೆ ದ್ವೇಷ ಸಂದೇಶ ಹರಡಿ ಕೋಮು ಭಾವನೆ ಕೆರಳಿಸುತ್ತಿದ್ದಾರೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಯತೀಶ್ ಎಂಬಾತ ದೂರು ನೀಡಿದ್ದ. ಕಳೆದ ಹತ್ತು ದಿನಗಳ ಹಿಂದೆ ಮೊಬೈಲ್ ವ್ಯಾಟ್ಸ್ ಆಪ್ ಗ್ರೂಪ್ ಗಳಲ್ಲಿ ಪೆರುವಾಯಿ ನಿವಾಸಿಗಳಾದ ಪ್ರಸ್ತುತ ವಿದೇಶದಲ್ಲಿ ಉದ್ಯೋಗದಲ್ಲಿರುವ ಅನ್ವರ್ ಮತ್ತು ನಿಯಾಜ್ ಎಂಬವರು ಕೋಮು ಭಾವನೆ ಕೆರಳಿಸುವ ಸಂದೇಶ ಗಳನ್ನು ಕಳುಹಿಸುತ್ತಿದ್ದರು. ಅಲ್ಲದೆ ಮಂಗಳೂರು ವಾಮಂಜೂರು ಆರ್.ಎಸ್.ಎಸ್.ನ ಕಾರ್ಯಕರ್ತರಿಗೆ ಹಾಗೂ ವಿದೇಶದಲ್ಲಿ ಕೆಲಸ ಮಾಡುವ ವಾಮಂಜೂರಿನ ಕೆಲ ಯುವಕರಿಗೆ ಪೋನ್ ಕರೆ ಮಾಡಿ ಸಂವಿಧಾನ ವಿರೋಧಿ ಎನ್.ಆರ್.ಸಿ.ಮತ್ತು ಸಿ.ಎ.ಎ.ಗೆ .ನನ್ನ ಬೆಂಬಲವಿಲ್ಲ ಎಂಬುವುದಾಗಿ ವ್ಯಾಟ್ಸಾಪ್ ನಲ್ಲಿ ಸಂದೇಶ ಕಳುಹಿಸುವಂತೆ ಒತ್ತಡ ಕೂಡಾ ಹಾಕಿದ್ದ.
ಈ ಕಾಯ್ದೆಯಿಂದ ಮುಸ್ಲಿಮರು ಭಾರತ ಬಿಟ್ಟು ತೊಲಗಬೇಕಾಗಿ ಬಂದರೆ ಮೋದಿ ಅಮಿತ್ ಶಾ ಹಾಗೂ ಆರ್.ಎಸ್.ಎಸ್.ಹಿಂದೂಗಳನ್ನು ಕೊಂದು ಹಾಕಿ ಹೋಗುತ್ತೇವೆ ಎಂದು ಸಂದೇಶಗಳನ್ನು ಕಳುಹಿಸಿ ಕೋಮ ಭಾವನೆ ಕೆರಳಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಹಾಗಾಗಿ ಸೌಹಾರ್ದತೆಗೆ ಭಂಗವನ್ನುಂಟು ಮಾಡಿ ಅಶಾಂತಿ ಸೃಷ್ಟಿಸುವ ಇವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿತ್ತು.
ಅನ್ವರ್ ಜೊತೆಗೆ ನಿಯಾಜ್ ಕೂಡಾ ಸಂದೇಶಗಳನ್ನು ಕಳುಹಿಸಿದ್ದು ಆತನ ವಿರುದ್ದವೂ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ.