ಉಡುಪಿ, ಜ 06 (DaijiworldNews/SM): ನಗರಸಭಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿರುವ ನಿವೇಶನ ರಹಿತರಿಗೆ ಸ್ವಂತ ಸೂರನ್ನು ನಿರ್ಮಿಸಲು ಉಡುಪಿ ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ ತನ್ನ ಪ್ರಯತ್ನದಿಂದ ಸರಳೇಬೆಟ್ಟುವಿನ ಹೆರ್ಗ ಗ್ರಾಮ ಹಾಗೂ ಶಿವಳ್ಳಿ ಗ್ರಾಮದ ಸಣ್ಣಕ್ಕಿಬೆಟ್ಟುವಿನಲ್ಲಿ ನಿವೇಶನ ನೀಡಲು ನಿರ್ಧರಿಸಲಾಗಿತ್ತು. ಈ ಕುರಿತಂತೆ ತನ್ನ ಅಧ್ಯಕ್ಷತೆಯಲ್ಲಿ ನಡೆದ ನಗರ ಆಶ್ರಯ ಸಮಿತಿ ಸಭೆಯಲ್ಲಿ ಆಯ್ಕೆಗೊಂಡ ಎಲ್ಲಾ ಅರ್ಹ 679 ಫಲಾನುಭವಿಗಳಿಗೆ ಮನೆ ನಿವೇಶನಗಳನ್ನು ನೀಡಲು ನಿರ್ಧರಿಸಿ ವಸತಿ ಸಮುಚ್ಚಯ ನಿರ್ಮಿಸಲು ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮ ಬೆಂಗಳೂರು ಇವರಿಗೆ ಮನವಿ ಸಲ್ಲಿಸಲಾಗಿತ್ತು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ನಿವೇಶನಕ್ಕೆ ಜಮೀನು ಗುರುತಿಸಲು ಕುಮ್ಕಿ ಭೂಮಿಯ ಸಮಸ್ಯೆಯನ್ನು ಪರಿಹರಿಸಲು ಹಾಗು ಅರ್ಹ ಫಲಾನುಭವಿಗಳ ಆಯ್ಕೆ ಮಾಡಲು ಒಟ್ಟು ಸುಮಾರು 20ಕ್ಕೂ ಅಧಿಕ ಅಧಿಕಾರಿಗಳ ಹಾಗು ಫಲಾನುಭವಿಗಳ ಸಭೆಗಳನ್ನು ನಡೆಸಿ ಚರ್ಚಿಸಿ ನಿವೇಶನ ರಹಿತರ ಕುಟುಂಬದ ಒಬ್ಬರಿಗೆ ಮಾತ್ರ ನಿವೇಶನ ಕೊಡುವ ಸೂತ್ರದಲ್ಲಿ ಫಲಾನುಭವಿಗಳ ವಿಚಾರಣೆ ಮಾಡಿ ಖಾತ್ರಿಗೊಳಿಸಿ ನಂತರ ಆಯ್ಕೆಗೊಂಡ ಅಂತಿಮ 679 ಫಲಾನುಭವಿಗಳಿಗೆ ಲಾಟರಿ ಎತ್ತುವ ಮೂಲಕ ಬಹಿರಂಗವಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು.
2018ರಲ್ಲಿ ಆಯ್ಕೆಗೊಂಡ ಎಲ್ಲಾ 679 ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಿ ಮನೆ ನಿರ್ಮಿಸಲು ಎಲ್ಲಾ ಸಹಕಾರವನ್ನು ನೀಡುವುದು ಉಡುಪಿ ಜಿಲ್ಲಾಧಿಕಾರಿಗಳ ಜವಾಬ್ದಾರಿ ಎಂದು ಹೇಳಿದರು.
ಪ್ರಸ್ತುತ ಫಲಾನುಭವಿಗಳಿಗೆ ಪ.ಜಾತಿ/ಪಂಗಡದವರು 50,000ರೂಪಾಯಿ ಹಾಗು ಇತರರು 90,000ರೂಪಾಯಿ ತಮ್ಮ ಪಾಲಿನ ವಂತಿಗೆ ಕಟ್ಟಲು ನಗರಸಭೆ ಆಡಳಿತ ನಿರ್ದೇಶನ ನೀಡಿದ್ದು ಆ ಮೊತ್ತವನ್ನು ಏಕಗಂಟಿನಲ್ಲಿ ಕಟ್ಟಲಾಗದ ಕಡುಬಡವರಿಗೆ ಕಂತಿನ ರೂಪದಲ್ಲಿ ಹಣಕಟ್ಟಲು ಅವಕಾಶ ನೀಡಬೇಕೆಂದು ಪ್ರಮೋದ್ ಮಧ್ವರಾಜ್ ಆಗ್ರಹಿಸಿದ್ದಾರೆ.