ಉಡುಪಿ, ಜ 06 (DaijiworldNews/SM): ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಜನಾಭಿಪ್ರಾಯ ಸಂಗ್ರಹ ಮಾಡುವ ಕಾರ್ಯಕ್ಕೆ ಉಡುಪಿ ಜಿಲ್ಲೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ಕಾಂಗ್ರೆಸ್ ಹಾಗೂ ಇತರ ಕೆಲವು ಪ್ರತಿ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ ಮಾತನಾಡುತ್ತಿದ್ದಾರೆ. ದೇಶದ ಸಾರ್ವಭೌಮತೆ, ಸಮಗ್ರತೆ ಮತ್ತು ಸುರಕ್ಷತೆಯ ಕಾರಣಗಳಿಗಾಗಿ ಈ ಕಾಯ್ದೆಯನ್ನು ತರಲಾಗಿದೆ ಎಂದು ಪ್ರಧಾನ ಮಂತ್ರಿಗಳು ಈಗಾಗಲೇ ಸ್ವಷ್ಟಪಡಿಸಿದ್ದಾರೆ.
ರಾಷ್ಟ್ರೀಯರು ಮತ್ತು ಅಂತಾರಾಷ್ಟ್ರೀಯರ ನಡುವೆ ಸಂಘರ್ಷ ನಡೆಯುತ್ತಲೇ ಬಂದಿದೆ. ಕಾಂಗ್ರೆಸ್ ನ ಯು.ಟಿ.ಖಾದರ್ ಐವನ್ ಡಿಸೋಜಾ ಹಾಗೂ ಈ ಕಾಯ್ದೆಯನ್ನು ವಿರೋಧಿಸುವವರು ಎಲ್ಲರೂ ಈ ಕಾಯ್ದೆಯಿಂದಾಗಿ ನಿಮಗಾಗಿರುವ ತೊಂದರೆ ಏನು ಎಂಬುವುದನ್ನು ಆತ್ಮ ಸಾಕ್ಷಿಯಾಗಿ ಹೇಳಬೇಕು ಎಂದರು.
ಇನ್ನು ಈ ಸಂದರ್ಭ ಮಾತನಾಡಿದ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಜನವರಿ 19 ರಂದು ಮಂಗಳೂರಿನಲ್ಲಿ ಗೃಹ ಸಚಿವ ಅಮಿತ್ ಷಾ ನೇತೃತ್ವದಲ್ಲಿ ನಡೆಯಲಿರುವ ಪೌರತ್ವ ತಿದ್ದುಪಡಿ ಕುರಿತಾದ ಸಮಾವೇಷದಲ್ಲಿ ಉಡುಪಿ ಜಿಲ್ಲೆಯಿಂದ ಸುಮಾರು 25 ರಿಂದ 30 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು. ಇನ್ನು ಉಡುಪಿ ಜಿಲ್ಲೆಯಾದ್ಯಂತ ಮನೆ ಮನೆಗೆ ತೆರಳಿ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.