ಮಂಗಳೂರು, ಜ.06 (Daijiworld News/PY) : ಪರೀಕ್ಷೆ ಬರೆಯಲೆಂದು ಬಂದ ಬಾಲಕ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಮೃತಪಟ್ಟ ಬಾಲಕನನ್ನು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶ್ರೀಪತಿ ಶಿಂಧೆ ಮತ್ತು ರಾಜಶ್ರೀ ದಂಪತಿಗಳ ಪುತ್ರ ಸಂದೇಶ್ (10) ಎಂದು ತಿಳಿದುಬಂದಿದೆ.
ಭಾನುವಾರ ಸಂಜೆ ಇತರ ಮಕ್ಕಳೊಡನೆ ದೇವಸ್ಥಾನದ ಕೆರೆಗೆ ಇಳಿದು ಸ್ನಾನ ಮಾಡುತ್ತಿದ್ದ ವೇಳೆ ಬಾಲಕ ಸಂದೇಶ್ ಅಸ್ವಸ್ಥಗೊಂಡಿದ್ದು, ತಕ್ಷಣವೇ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸಂದೇಶ್ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ 3.30ರ ವೇಳೆಗೆ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಮಂಗಳೂರಿನ ಖಾಸಗಿ ಹೈಸ್ಕೂಲ್ ನಲ್ಲಿ ನಡೆದಿದ್ದ ಸೈನಿಕರ ಮಕ್ಕಳ ಶಾಲೆಗೆ ಸೇರ್ಪಡೆ ಪರೀಕ್ಷೆ ಬರೆಯಲೆಂದು ಭಾನುವಾರ ಅಥಣಿಯ ಸುಮಾರು 60 ಮಕ್ಕಳು ಪಾಲ್ಗೊಂಡಿದ್ದರು. ಮಕ್ಕಳ ಜೊತೆಗೆ ಶಾಲಾ ಶಿಕ್ಷಕರು ಬಂದಿದ್ದರು. ಪರೀಕ್ಷೆ ಮುಗಿಸಿದ ಬಳಿಕ ಸಂಜೆಯ ವೇಳೆ ಎಲ್ಲಾ ಮಕ್ಕಳು ದೇವಸ್ಥಾನಕ್ಕೆ ಹೋಗಿದ್ದರು. ಕೆರೆಯನ್ನು ನೋಡಿದ ಮಕ್ಕಳು ಸ್ನಾನ ಮಾಡುವುದಕ್ಕಾಗಿ ಕೆರೆಗೆ ಇಳಿದಿದ್ದಾರೆ. ಸ್ನಾನ ಮಾಡುತ್ತಿದ್ದ ವೇಳೆ ಸಂದೇಶ್ ನೀರಿನಲ್ಲಿ ಮುಳುಗಿ ಅಸ್ವಸ್ಥನಾಗಿದ್ದ. ತಕ್ಷಣವೇ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸೋಮವಾರ ಮುಂಜಾನೆ ಮೃತಪಟ್ಟಿದ್ದಾನೆ.
ಸಂದೇಶ್ ತಂದೆ ಶ್ರೀಪತಿ ಶಿಂಧೆ ಭೂ ಸೇನೆಯಲ್ಲಿದ್ದು, ಪ್ರಸ್ತುತ ಅರುಣಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.