ಮಂಗಳೂರು, ಜ 06 (Daijiworld News/MSP): ಡಿ. 19 ರಂದು ನಗರದಲ್ಲಿ ನಡೆದ ಹಿಂಸಾಚಾರದ ಗಲಭೆ ಮತ್ತು ಗೋಲಿಬಾರ್ ವಿಚಾರವಾಗಿ ಬೆಂಗಳೂರಿನ ಇಂಡಿಯನ್ ಸೋಷಿಯಲ್ ಇನ್ಸ್ಟಿಟ್ಯೂಟ್ನ ಲಿಸೆನಿಂಗ್ ಪೋಸ್ಟ್ ಸಂಘಟನೆಯು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ನೇತೃತ್ವದಲ್ಲಿ ಸೋಮವಾರ ‘ಜನತಾ ಅದಾಲತ್’ ನ್ನು ನಗರದ ಖಾಸಗಿ ಹೊಟೇಲ್ ನಲ್ಲಿ ಜ.06 ರ ಸೋಮವಾರ ಆಯೋಜಿಸಲಾಗಿದೆ.
ಆದರೆ ಅದಾಲತ್ ಪ್ರಾರಂಭವಾದ ಬೆನ್ನಲ್ಲೇ ಕೆಲ ಗೊಂದಲಗಳು ಏರ್ಪಟ್ಟ ಹಿನ್ನಲೆಯಲ್ಲಿ ಸ್ಥಗಿತಗೊಂಡು ಬಳಿಕ ವಿಚಾರಣೆ ಮತ್ತೆ ಆರಂಭವಾಗಿದೆ.
ಪ್ರಕರಣ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸ್ ತನಿಖೆ ಮತ್ತು ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಯುತ್ತಿದೆ. ಈ ಹಂಚದಲ್ಲಿ ಜನತಾ ಅದಾಲತ್ ವಿಚಾರಣೆ ಸರಿಯಲ್ಲ ಎಂದು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗೋವಿಂದರಾಜು ಅವರು ಕಾರ್ಯಕ್ರಮದ ಅಯೋಜಕರಾಗಿರುವ ಅಶೋಕ್ ಮರಿದಾಸ್ ಅವರಿಗೆ ನೋಟೀಸ್ ಜಾರಿ ಮಾಡಿ ಮತ್ತೊಂದು ಪ್ರತಿಯನ್ನು ಹೋಟೆಲ್ ವ್ಯವಸ್ಥಾಪಕರಿಗೂ ನೀಡಿದ್ದರು. ಹೀಗಾಗಿ ಅದಾಲತ್ ಗೆ ಸ್ಥಳವಾಕಾಶ ನೀಡಿದ್ದ ಹೊಟೇಲ್ ಆ ಬಳಿಕ ಅದಾಲತ್ ಗೆ ಅಕ್ಷೇಪ ವ್ಯಕ್ತಪಡಿಸಿತು. ಹಲವಾರ ಹೇಳಿಕೆ ಪಡೆಯುತ್ತಿದ್ದಂತೆ ಗೊಂದಲ ಏರ್ಪಟ್ಟು ಸಭೆ ಸ್ಥಗಿತವಾಯಿತು.
ಗೊಂದಲ ನಿವಾರಣೆಯಾದ ಬಳಿಕ , ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಹಿರಿಯ ವಕೀಲ ಬಿ.ಟಿ.ವೆಂಕಟೇಶ್ ಮತ್ತು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ನೇತೃತ್ವದ ತಂಡ ಜನತಾ ಅದಾಲತ್ ಮುಂದುವರಿಸಿದರು.