ಉಳ್ಳಾಲ, ಜ 05 (DaijiworldNews/SM): ಹಿಂದೂ ರಾಷ್ಟ್ರ ಇನ್ನು ಒಂದು ಸಾವಿರ ವರ್ಷವಾದರೂ ಮಾಡಲು ಅಸಾಧ್ಯ. ಸಂವಿಧಾನ ಮುಟ್ಟಲು ಹೋದರೆ ಭಾರತೀಯರು ಸುಮ್ಮನಿರುವುದಿಲ್ಲ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅಭಿಪ್ರಾಯಪಟ್ಟರು.
ಉಳ್ಳಾಲ ಮುಸ್ಲಿಂ ಒಕ್ಕೂಟ ವತಿಯಿಂದ ಉಳ್ಳಾಲದ ಹಝ್ರತ್ ಶಾಲಾ ಮೈದಾನದಲ್ಲಿ ಜರಗಿದ ಎನ್ ಪಿ ಆರ್, ಎನ್ ಆರ್ ಸಿ ಹಾಗೂ ಸಿಎಎ ವಿರುದ್ಧ ಭಾನುವಾರ ಹಮ್ಮಿಕೊಳ್ಳಲಾದ ಬೃಹತ್ ಸಮಾನ ಮನಸ್ಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದಲ್ಲಿ ಸಂವಿಧಾನ ವಿರೋಧಿ ಕಾನೂನು ಜಾರಿಗೊಳಿಸುವ ಮೂಲಕ ಕೇಂದ್ರ ಸರಕಾರದ ನೀತಿಯಿಂದಾಗಿ ಇದುವರೆಗೆ ಕೈಯಲ್ಲಿ ತಿರಂಗಾ ಹಿಡಿಯದವನು ತಿರಂಗ ಹಿಡಿದಿದ್ದಾನೆ. ಪ್ರಜಾಪ್ರಭುತ್ವ ಏನು ಎಂಬುವುದನ್ನು ಕೇಂದ್ರ ತೋರಿಸಿಕೊಡಲು ಅವಕಾಶ ಕಲ್ಪಿಸಿದೆ. ಮಾಧ್ಯಮ, ವಿಶ್ವವಿದ್ಯಾಲಯಗಳನ್ನು ಕೈಯಲ್ಲಿ ಇಟ್ಟುಕೊಳ್ಳುತ್ತಾ ದೇಶವನ್ನು ಅಧೋಗತಿಯತ್ತ ಕೊಂಡೊಯ್ಯಲು ಹೊರಟಿದ್ದಾರೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಲು ರಾಜ್ಯವನ್ನೇ ಜೈಲಾಗಿ ಮಾಡಿ ಕಾನೂನು ಜಾರಿಗೆ ತಂದರು. ಇಲ್ಲಿಂದ ಭಾರತವನ್ನು ಕಳೆದುಕೊಳ್ಳುವ ಭಯ ಬಂತು. ಅದಕ್ಕಾಗಿಯೇ ಸರಕಾರಿ ಸೇವೆಯಿಂದ ಹೊರಬಂದಿರುವೆನು ಎಂದಿದ್ದಾರೆ.
ಪ್ರಧಾನಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬರೀ ಸುಳ್ಳು ಹೇಳುತ್ತಿದ್ದಾರೆ. ಹಿಂದೂ ಅಲ್ಪಸಂಖ್ಯಾತರಿಗಾಗಿ ಕಾಯ್ದೆ ಅನ್ನುವ ಸುಳ್ಳು ಹೇಳುತ್ತಿದ್ದಾರೆ. ಆದರೆ ಜಾರಿಯಾದ ಕಾಯಿದೆಯಲ್ಲಿ ರಿಲೀಜಿಯಿಸ್ ಪರ್ಸಿಕ್ಯುಲೇಟಡ್ ಅನ್ನುವ ಪದವೇ ಇರಲಿಲ್ಲ. ಪ್ರಧಾನಿ ಹಾಗೂ ಗೃಹಮಂತ್ರಿ ನಡುವೆ ಚರ್ಚೆಯೇ ನಡೆಯದೇ, ದಿನಕ್ಕೊಂದು ಹೇಳಿಕೆಗಳನ್ನು ಜನತೆ ಮುಂದೆ ನೀಡುತ್ತಾ ಗೊಂದಲದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಇದು ಭಾರತದ ಸೌಹಾರ್ದತೆಗೆ ಕಠಿಣ ಹಾಗೂ ವಿರೋಧಿ ಕಾನೂನು ಆಗಿದೆ. ನಾಯಕತ್ವ ಇಲ್ಲದೇ ಎಲ್ಲರೂ ಸಂವಿಧಾನ ಉಳಿಸಲು ಹೊರಬರುತ್ತಿದ್ದಾರೆ. ಎನ್ ಪಿ ಆರ್, ಎನ್ ಆರ್ ಸಿ ಮೂಲಕ ಜನರನ್ನು ಜನರಿಂದ ದೂರ ಮಾಡಿ, ದ್ವೇಷ ಹುಟ್ಟಿಸಿ, ಅವರಿಂದ ಮತ ಪಡೆಯಬೇಕು ಅನ್ನುವ ಹುನ್ನಾರ ಸರಕಾರಕ್ಕಿದೆ. ಕೇಂದ್ರ ಗಲಭೆ ಆಗಲು ಕಾಯುತ್ತಲೇ ಇದ್ದಾರೆ. 25 ದಿನಗಳವರೆಗೂ ಎಲ್ಲಿಯೂ ಆಗಿಲ್ಲ. ಇದರಿಂದ ಕೇಂದ್ರ ಸರಕಾರ ಸೋಲು ಅನುಭವಿಸಿದೆ. ಇದು ಕೋಪ ತೋರಿಸುವ ಸಮಯವಲ್ಲ, ಧೈರ್ಯ ತೋರಿಸುವ ಸಮಯ. ಗೃಹಸಚಿವರಿಗೆ ಈಗಾಗಲೇ ಪತ್ರ ಬರೆದಿದ್ದೇನೆ. ಎನ್ ಆರ್ ಸಿ ಕೇಳಿಕೊಂಡು ಮನೆವರಗೆ ಅಧಿಕಾರಿಗಳು ಬಂದಲ್ಲಿ ಯಾವುದೇ ದಾಖಲೆಗಳನ್ನು ದೇವರಾಣೆಗೂ ಕೊಡುವುದಿಲ್ಲ. ಜೈಲಿಗೆ ಹಾಕಿದರೂ ಸಿದ್ಧ ಎಂದರು.
ಕ್ಷೇತ್ರ ಶಾಸಕ ಯು.ಟಿ. ಖಾದರ್ ಮಾತನಾಡಿ ಉಳ್ಳಾಲ ಸೇರಿದಂತೆ ದೇಶದಾದ್ಯಂತ ನಡೆಯುತ್ತಿರುವ ಹೋರಾಟಗಳಿಂದಾಗಿ ಕೇಂದ್ರ ಸರಕಾರದ ಕಾನೂನು ವಿಫಲವಾಗಲಿದೆ. ಸಂವಿಧಾನಕ್ಕೆ ಗೆಲುವಾಗಲಿದೆ.
ದಿನೇಶ್ ಉಳಿಪ್ಪಾಡಿ ಮಾತನಾಡಿ ನರೇಂದ್ರ ಮೋದಿ ಅವರು ಈ ವರೆಗೆ ಜಾರಿಗೆ ತಂದ ಯಾವುದೇ ಕಾರ್ಯಕ್ರಮಗಳು ಪೂರ್ಣಗೊಂಡಿಲ್ಲ. ಪೌರತ್ವ ಕಾಯ್ದೆಯನ್ನು ಅವರು ಪೂರ್ಣಗೊಳಿಸುವುದಿಲ್ಲ ಎಂದ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಅನ್ನುವುದು ಮುಸ್ಲಿಂ ವಿರೋಧಿ ಅಲ್ಲ ಅದು ದೇಶ ವಿರೋಧಿ ಕಾಯ್ದೆ. ಮೂರು ದೇಶಗಳ ಮುಸ್ಲಿಮರಿಗೆ ಅವಕಾಶ ಇಲ್ಲ ಎನ್ನುವ ಮೂಲಕ ಭಾರತದಲ್ಲಿರುವ ಮುಸ್ಲಿಮರಲ್ಲಿ ಭಯ ಹುಟ್ಟಿಸುವ ಕಾರ್ಯ ಆಗುತ್ತಿದೆ ಎಂದ ಅವರು ಪೌರತ್ವ ಕಾಯಿದೆ ಡಿಟೆನ್ಶನ್ ಸೆಂಟರ್ ನಲ್ಲಿ 135 ಕೋಟಿ ಭಾರತೀಯರನ್ಬು ಕೂಡಿ ಹಾಕಿ ಮೋದಿ ಅವರ ಚೌಕಿದಾರ ಆಗ್ತಾರ ಎಂದು ಪ್ರಶ್ನಿಸಿದರು.