ಮಂಗಳೂರು, ಜ 05 (DaijiworldNews/SM): ಕೆಲವು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದ ಸಂದೇಶವೊಂದಕ್ಕೆ ಇದೀಗ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ ನೀಡಿದ್ದು, ವಿವಾದಕ್ಕೆ ತೆರೆ ಎಳೆದಿದ್ದಾರೆ. ಉಡುಪಿ ಪುರಭವನದಲ್ಲಿ ನಡೆಯುವ ಬಿಲ್ಲವ - ಮುಸ್ಲಿಂ ಸಮಾವೇಶದಲ್ಲಿ ತಾನು ಭಾಗವಹಿಸುವುದಿಲ್ಲ ಎನ್ನುವ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ಬ್ರೇಕ್ ಹಾಕಿದ್ದಾರೆ.
ಉಡುಪಿ ಪುರಭವನದಲ್ಲಿ ನಡೆಯುವ ಬಿಲ್ಲವ - ಮುಸ್ಲಿಂ ಸಮಾವೇಶದಲ್ಲಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಭಾಗವಹಿಸಲಿದ್ದಾರೆ ಎಂಬ ಬಗ್ಗೆ ಸಂದೇಶಗಳು ಹರಿದಾಡುತ್ತಿದ್ದವು. ಅಲ್ಲದೆ ಈ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿತ್ತು. ಆದರೆ ಇದೀಗ ಈ ವಿಚಾರಕ್ಕೆ ತೆರೆಬಿದ್ದಿದೆ. ಮಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ತಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಅಲ್ಲದೆ ಆ ಕಾರ್ಯಕ್ರಮಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಈ ಹಿಂದೆಯೇ ನಿರ್ಧಾರವಾದಂತೆ ಜನವರಿ 11ರಂದು ತಾನು ಶಿವಮೊಗ್ಗ ಜಿಲ್ಲೆಯ ಪ್ರವಾಸದಲ್ಲಿದ್ದು, ಇಲಾಖಾ ಪ್ರಗತಿ ಪರಿಶೀಲನೆ ಮತ್ತು ಅರ್ಚಕರ ಸಮಾವೇಶ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ ಎಂದು ಹೇಳಿದರು.