ಮೈಸೂರು, ಜ 25: ಬಿಜೆಪಿ ಮುಖಂಡರು ಆಗಮಿಸುವ ಹಿನ್ನಲೆಯಲ್ಲಿ ಇಂದು ನಡೆಯುವ ಕರ್ನಾಟಕ ಬಂದ್ ಗೆ ಸಹಮತ ವ್ಯಕ್ತಪಡಿಸಿದ ಬಿಜೆಪಿ ರ್ಯಾಲಿ ಮಾಡೇ ಮಾಡುತ್ತೇವೆ ಎಂದು ಹೇಳಿಕೊಂಡಿದ್ದರು. ಅಲ್ಲದೆ ಕರ್ನಾಟಕ ಬಂದ್ ಕೈ ಬಿಡದಿದ್ದರೆ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಆಗಮನದ ದಿನವೂ ಬಂದ್ಗೆ ಕರೆ ಕೊಡಲು ಬಿಜೆಪಿ ಮುಂದಾಗಲಿದೆ ಎಂದು ಎಚ್ಚರಿಕೆ ನೀಡಿದ್ದರು . ಅಲ್ಲದೆ ಕನ್ನಡಪರ ಸಂಘಟನೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಬಂದ್ಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ ಬಿಜೆಪಿ ಅಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಕರ್ನಾಟಕ ಬಂದ್ ನಡುವೆಯೂ ಬಿಜೆಪಿಯ ಪರಿವರ್ತನಾ ರ್ಯಾಲಿ ಜ ೨೫ ರ ಬುಧವಾರ ಮೈಸೂರಿನಲ್ಲಿ ನಡಿತಾ ಇದ್ದು, ಮುಷ್ಕರವನ್ನು ಗಣನೆಗೆ ತೆಗೆದುಕೊಳ್ಳದೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಸಮಾವೇಶದಲ್ಲಿ ಭಾಗವಹಿಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಕೂಡಾ ಮಧ್ಯಾಹ್ನ 2.15ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದರು. ಸಭಾ ಕಾರ್ಯಕ್ರಮದ ಆರಂಭಕ್ಕೂ ಮೊದಲು ಬೃಹತ್ ರ್ಯಾಲಿಯಲ್ಲಿ ಅಮಿತ್ ಶಾ ಭಾಗವಹಿಸಿದರು.
ಸಾಂದರ್ಭಿಕ ಚಿತ್ರ
ಬಳಿಕ ಮಹಾರಾಜ ಕಾಲೇಜು ಮೈದಾನದಲ್ಲಿ ಯಾತ್ರೆಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಶಾ, ಕರ್ನಾಟಕ ಬಂದ್ ನಡೆಸಿ ಸರ್ಕಾರ ಇಂದಿನ ಸಮಾವೇಶ ನಡೆಸುವುದನ್ನು ತಡೆಯಲು ಯತ್ನಿಸಿತು, ಆದರೆ ಸಾಧ್ಯವಾಗಿಲ್ಲ, ಚಾಮುಂಡೇಶ್ವರಿ ದೇವಿಯ ಪವಿತ್ರ ಭೂಮಿಯಲ್ಲಿ ನಿಂತು ನಾನು ಹೇಳುತ್ತಿದ್ದೇನೆ. ಕರ್ನಾಟಕದ ಜನರು ಈ ಬಾರಿ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದಿಂದ ಕಿತ್ತೊಗೆಯುತ್ತಾರೆ ಎಂದು ಕಿಡಿಕಾರಿದರು. ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಎಸ್ಡಿಪಿಐ ಮೇಲಿನ ಕೇಸುಗಳನ್ನು ಸರ್ಕಾರ ವಾಪಸ್ ಪಡೆದಿದೆ. ಈ ಸರ್ಕಾರ ಹಿಂದೂ ವಿರೋಧಿಗಳನ್ನು ಬೆಂಬಲಿಸುತ್ತಿದೆಯೇ? ಎಂದು ಪ್ರಶ್ನಿಸಿದರು. ಭ್ರಷ್ಟಾಚಾರ ಎಂದರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಎಂದರೆ ಭ್ರಷ್ಟಾಚಾರ. ಇಂತಹ ಸರ್ಕಾರವನ್ನು ನಾವು ರಾಜ್ಯದಿಂದ ಕಿತ್ತೊಗೆಯೋಣ ಎಂದು ಕರೆ ನೀಡಿದರು.
ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಮಾಜಿ ಸಚಿವರಾದ ವಿ.ಶ್ರೀನಿವಾಸ ಪ್ರಸಾದ್, ಸುರೇಶ್ ಕುಮಾರ್, ಶೋಭಾ ಕರಂದ್ಲಾಜೆ, ಕೆ.ಎಸ್. ಈಶ್ವರಪ್ಪ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.