ಮಂಗಳೂರು, ಜ.05 (Daijiworld News/PY) : ನಗರದಲ್ಲಿ ಡಿ.19ರಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆದ ಹಿಂಸಾಚಾರದಲ್ಲಿ ತಪ್ಪಿತಸ್ಥರು ಯಾರೇ ಆದರೂ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಜ.04ರ ಶನಿವಾರದಂದು ಮಂಗಳೂರಿಗೆ ಭೇಟಿ ನೀಡಿ ನಗರ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಮಾತನಾಡಿದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಅವರು, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಮಂಗಳೂರು ಹಿಂಸಾಚಾರದ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿಗೆ ನೀಡಿದ ನಂತರ ಸಿಐಡಿ ತಂಡ ಮಂಗಳೂರಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ತನಿಖೆ ಪ್ರಾರಂಭಿಸಿತ್ತು.
ಶನಿವಾರ ಮಂಗಳೂರಿಗೆ ಆಗಮಿಸಿದ ಅಮರ್ ಕುಮಾರ್ ಪಾಂಡೆ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಕಮಿಷನರ್ ಡಾ.ಪಿಎಸ್ ಹರ್ಷ, ಎಸ್ಪಿ ಲಕ್ಷ್ಮೀ ಪ್ರಸಾದ್, ಡಿಸಿಪಿಗಳಾದ ಅರುಣಾಂಶುಗಿರಿ ಸೇರಿದಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ಪೌರತ್ವ ಕಾಯ್ದೆಯನ್ನು ವಿರೋಧಿಸಿ ನಗರದಲ್ಲಿ ಶನಿವಾರದಂದು ಪ್ರತಿಭಟನೆಗೆ ನೀಡಿದ್ದ ಕರೆಯನ್ನು ಮುಂದೂಡಿದ್ದರೂ ಬೆಳಗ್ಗಿನಿಂದಲೇ ನೆಹರೂ ಮೈದಾನ ಸೇರಿದಂತೆ ನಗರದ ಹಲವೆಡೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.