ಮಂಗಳೂರು, ಜ 04 ( Dajiworld News/MB) : ಮಂಗಳೂರು ಸೈಬರ್ ಠಾಣೆ ಪೊಲೀಸರು, ಮಂಗಳೂರು ನಡೆದ ಹಿಂಸಾಚಾರದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಡುತ್ತಿದ್ದ ಆರೋಪದಲ್ಲಿ 60ಕ್ಕೂ ಅಧಿಕ ಮಂದಿಗೆ ನೋಟಿಸ್ ಕಳುಹಿಸಿದ್ದು ವಿವರಣೆ ನೀಡದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಹಿಂಸಾಚಾರ ನಡೆಯುವ ಮುನ್ನ ಹಾಗೂ ನಡೆದ ನಂತರ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಧರ್ಮ ಅವಹೇಳನ ಹಾಗೂ ಪ್ರಚೋದನಕಾರಿ ಸಂದೇಶ ರವಾನೆ ಮಾಡುತ್ತಿದ್ದ 60ಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡಲಾಗಿದ್ದು ಈ ಪೈಕಿ ಮೊಯ್ದೀನ್ ಹಮೀಜ್ ಹಾಗೂ ಜಲ್ದಿ ಸಿದ್ಧಿಕ್ ಎಂಬವರನ್ನು ಪೊಲೀಸರು ಈಗಾಗಲೇ ಬಂಧನ ಮಾಡಿದ್ದಾರೆ. ಉಲೀದ ಆರೋಪಿಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.
ಹಾಗೆಯೇ ಈ ನೋಟಿಸ್ ಪಡೆದವರು ಖುದ್ದು ತನಿಖಾಧಿಕಾರಿ ಮುಂದೆ ಹಾಜರಾಗಿ ವಿವರಣೆ ನೀಡಬೇಕು. ತಾವು ಯಾವುದೇ ಪ್ರಚೋದನೆ ಮಾಡಿಲ್ಲ ಎಂದು ಹೇಳುವವರು ಆ ಕುರಿತು ಅದಕ್ಕೆ ತಕ್ಕುದಾದ ಪುರಾವೆಯನ್ನು ನೀಡಿ ವಿವರಣೆಯನ್ನು ನೀಡಬೇಕಿದೆ.
ಇನ್ನು ಸೈಬರ್ ಆರೋಪದ ಹಿನ್ನಲೆಯಲ್ಲಿ ಪ್ರಚೋದನಕಾರಿ ಸಂದೇಶ ರವಾನೆ ಮಾಡಿದವರಿಗೆ ಪೊಲೀಸರು ನೋಟಿಸ್ ನೀಡುತ್ತಿದ್ದಂತೆ ಹಲವರು ಗ್ರೂಪ್ನಿಂದ ಸ್ವಯಂ ಲೆಫ್ಟ್ ಆಗಿದ್ದಾರೆ. ಕೆಲವರು ಗ್ರೂಪ್ಗೆ ಯಾವುದೇ ಪ್ರಚೋದನಕಾರಿ ಸಂದೇಶ ರವಾನೆ ಮಾಡದಂತೆ ಪ್ರಚೋದನಕಾರಿ ಸಂದೇಶ ರವಾನೆ ಮಾಡಿದವರಿಗೆ ನೀಡಿದ ನೋಟಿಸ್ ಪ್ರತಿಗಳನ್ನು ರವಾನೆ ಮಾಡುತ್ತಿದ್ದಾರೆ.
ಹಾಗೆಯೇ ಕೆಲವರು ವಿದೇಶದಲ್ಲಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಿಯಬಿಡುತ್ತಿದ್ದು ಅವರ ಮೇಲೂ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ.