ಉಳ್ಳಾಲ, ಜ 03 (DaijiworldNews/SM): ದೇಶದಲ್ಲಿ ಕೇವಲ ಎರಡು ಲಕ್ಷ ಅಕ್ರಮ ವಲಸಿಗರು ಇದ್ದಾರೆ ಎಂದು ಅಂಕಿ ಅಂಶ ತಿಳಿಸಿದ್ದು ಸರಕಾರ ಕೋಟಿಯಷ್ಟು ಅಕ್ರಮ ವಲಸಿಗರಿದ್ದಾರೆ ಎಂದು ಲೆಕ್ಕ ಕೊಡುವುದರ ಹಿಂದೆ ದೇಶದ ಮುಸ್ಲಿಮರನ್ನು ದಮನಿಸುವ ಪ್ರಯತ್ನ ಕಾಣುತ್ತಿದೆ. ಅನಾದಿಕಾಲದಿಂದಲೂ ಬಂದಿರುವ ಹಿಂದೂ ಮುಸ್ಲಿಂ ಸಾಮರಸ್ಯ ಇಲ್ಲದಂತೆ ಮಾಡುವ ಇಂತಹ ಕೃತ್ಯಕ್ಕೆ ಜನತೆ ಅವಕಾಶ ಕೊಡಬಾರದು ಎಂದು ಮಲಯಾಳಂ ಚಿತ್ರ ಹಾಗೂ ಸಾಕ್ಷ್ಯಚಿತ್ರ ನಿರ್ದೇಶಕ ಗೋಪಾಲ್ ಮೆನನ್ ಹೇಳಿದರು.
ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಸಂಯುಕ್ತ ನಾಗರಿಕ ವೇದಿಕೆ ವತಿಯಿಂದ ಶುಕ್ರವಾರ ಕೆ.ಸಿ.ರೋಡು ಜಂಕ್ಷನ್ ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ವೀರ ಮರಣವನ್ನಪ್ಪಿದ ಟಿಪ್ಪು ಸುಲ್ತಾನ್, ಗೌರಿ ಲಂಕೇಶ್ ಹುಟ್ಟಿದ ಮಣ್ಣು. ಪೌರತ್ವದ ಮಸೂದೆಯನ್ನು ಜಾರಿಗೆ ತರಲು ಜೀವ ಬೆಲೆ ತೆತ್ತರೂ ಅವಕಾಶ ಕೊಡಲಾರೆವು. ಬಾಬರಿ ಮಸೀದಿಯ ತೀರ್ಪು ಸಂಘಪರಿವಾರದ ಪರವಾಗಿ ಬಂದು ಅವರ ಮನಸ್ಸು ಖುಷಿಗೊಂಡಿದ್ದರೂ ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ತಲಪಾಡಿಯಲ್ಲಿ ಯಾವುದೇ ಅಹಿತಕರ ಘಟನೆ, ಕಲ್ಲು ಎಸೆಯುವ ಪ್ರಸಂಗ ನಡೆದಿಲ್ಲ. ತಲಪಾಡಿಯಲ್ಲಿ ಗಲಭೆ ಆಗುತ್ತದೆ ಎಂಬ ಚಿಂತೆಯಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ತಲಪಾಡಿ ಜನತೆಯ ಬಗ್ಗೆ ಭೀತಿ ಬೇಡ. ಅವರು ಶಾಂತಿಪ್ರಿಯರು. ಯಾವುದೇ ಕೆಲಸ ಮಾಡುವವನಾಗಲಿ, ಯಾವುದೇ ಜಾತಿ, ಧರ್ಮದವನಾಗಿದ್ದರೂ ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು ಎಂದು ಗೊತ್ತಿದ್ದರೂ ಮೋದಿ ನಡೆ ಈ ರೀತಿ ಮುಂದುವರಿದರೆ ಮುಂದಿನ ಚುನಾವಣೆ ತನಕ ಸರಕಾರ ಖಂಡಿತ ಇರುವುದಿಲ್ಲ ಎಂದರು.
ಹಿಟ್ಲರ್ ಕೂಡಾ ಜರ್ಮನ್ ಜನತೆಗೆ ಒಳ್ಳೆಯ ದಿನ ಕರುಣಿಸುತ್ತೇನೆ ಎಂದು ಅಲ್ಲಿನ ಜನರನ್ನು ರಕ್ತಸಮುದ್ರದಲ್ಲಿ ಮುಳುಗಿಸಿ ಅಟ್ಟಹಾಸ ಮೆರೆದವ ಯುದ್ಧದಲ್ಲಿ ಸೋಲುವ ಹಂತದಲ್ಲಿ ಆತ್ಮಹತ್ಯೆ ಮಾಡಿದ್ದನ್ನು ನೆನಪಿಸಿಕೊಳ್ಳಬೇಕಿದೆ. ಇವಿಎಂ ಯಂತ್ರದಲ್ಲಿ ಅಕ್ರಮ ಸಾಕ್ಷಿಯಾಗಿ ಅಮೇಥಿಯಲ್ಲಿ ನಡೆದ ಚುನಾವಣೆಯಲ್ಲಿ ಚಲಾಯಿಸಲ್ಪಟ್ಟ ಮತಕ್ಕಿಂತಲೂ 13,000 ಹೆಚ್ಚಿನ ಮತ ಇವಿಎಂನಲ್ಲಿ ದಾಖಲಾಗಿದೆ. ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಹಿಟ್ಲರ್ ಜೀವನ ಅರಿತುಕೊಂಡು ಮೋದಿ ಒಂದು ನೆನಪಿಟ್ಟುಕೊಳ್ಳಬೇಕು, ಇತಿಹಾಸದಲ್ಲಿ ಯಾವತ್ತೂ ಕ್ಷಮೆ ಇಲ್ಲ, ಇತಿಹಾಸ ಮರುಕಳಿಸುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದರು. ಒಟ್ಟು ಭಾರತವನ್ನು ಧರ್ಮಗಳ ಆಧಾರದಲ್ಲಿ ವಿಭಜಿಸುವ ಪ್ರಯತ್ನ ನಡೆಯುತ್ತಿರುವುದು ಖಂಡನೀಯ ಎಂದರು.
ನ್ಯಾಯವಾದಿ ಸುಧೀರ್ ಕುಮಾರ್ ಮರೊಳಿ ಮಾತನಾಡಿ ಮಂಗಳೂರಿನಲ್ಲಿ ಪ್ರತಿಭಟನೆ ಮಾಡುವ ಹಾಗಿಲ್ಲ. ತಲಪಾಡಿಯಲ್ಲಿ ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟ ಉಳ್ಳಾಲ ಪೊಲೀಸರಿಗೆ ಮೊದಲ ಸಲಾಂ. ಗೋಲಿಬಾರ್ ನಲ್ಲಿ ಬಲಿಯಾದ ಇಬ್ಬರ ಕುಟುಂಬದ ಜತೆ ಎಲ್ಲರೂ ಇದ್ದಾರೆ. ಬಿಜೆಪಿ ಸಂಘ ಪರಿವಾರ ವಿವಿಧ ಮಸೂದೆ ಸೃಷ್ಟಿಸುವ ಮೂಲಕ ದೇಶವನ್ನು ವಿಭಜಿಸುವ ಪ್ರಯತ್ನ ಮುಂದುವರಿಸಿದರೆ ಅದರ ವಿರುದ್ಧದ ಹೋರಾಟಕ್ಕೆ ನಾವು ಎಲ್ಲ ಧರ್ಮದ ಎಲ್ಲ ಜಾತಿಯ ಜೊತೆಗಿದ್ದೇವೆ ಎಂದರು. ಬಿಜೆಪಿ ಮುಖಂಡರು ಕರ್ನಾಟಕದ ನಾಡಗೀತೆಯ ಅರ್ಥ ಸಾರ ಕಲಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆ.ಸಿ.ರೋಡು ಅಲ್-ಮುಬಾರಕ್ ಜುಮಾ ಮಸೀದಿಯ ಖತೀಬ್ ಮುನೀರ್ ಸಖಾಫಿ ಮಾತನಾಡಿ ಲವ್ ಜಿಹಾದ್, ಭಯೋತ್ಪಾದಕರು ಎಂದು ಮುಸ್ಲಿಮರನ್ನು ಗೇಲಿ ಮಾಡುವುದು ಪರಿಪಾಠವಾಗಿದೆ. ಪ್ರವಾದಿ ಅವರು ಭಯೋತ್ಪಾದನೆ ಕಲಿಸಿಲ್ಲ, ದಯೋತ್ಪಾದನೆ ಕಲಿಸಿದ್ದಾರೆ. ನಮ್ಮ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ನಡೆದರೂ ನಾವು ಹೆದರದೆ, ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸಲಿದ್ದೇವೆ. ಭಾರತದಲ್ಲಿ ಎಲ್ಲಾ ಧರ್ಮೀಯರು ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿದ್ದು ನಮ್ಮ ನಡುವೆ ಯಾವುದೇ ಸಮಸ್ಯೆ ಬಂದಿಲ್ಲ ಎಂದರು.
ಶಾಸಕ ಯು.ಟಿ.ಖಾದರ್ ಮಾತನಾಡಿ, ಪೌರತ್ವ ಕಾಯ್ದೆ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಸೋಲಾಗುತ್ತದೆಯೇ ಹೊರತು, ಭಾರತಕ್ಕೆ ಸೋಲಾಗದು. ಇದು ಅಂಬೇಡ್ಕರ್ ಅವರ ಸಂವಿಧಾನ ಕನಸಿನ ಭಾರತ ಕಟ್ಟುವ ಹೋರಾಟ. ಸಂವಿಧಾನ ಪೌರತ್ವ ಕಾಯ್ದೆ ಜಾರಿಗೆ ತರಲು ಬಿಡುವುದಿಲ್ಲ. ಯಾರಿಗೂ ಪೌರತ್ವ ಕೊಡುವುದಕ್ಕೆ ವಿರೋಧವಿಲ್ಲ, ಆದರೆ ಒಂದು ಧರ್ಮವನ್ನು ಹೊರಗಿಟ್ಟಿರುವುದಕ್ಕೆ ವಿರೋಧವಿದೆ. ಪಾಕಿಸ್ತಾನಕ್ಕೆ ಹೋಗಿ ಊಟ ಮಾಡಿ ಬಂದವರು ನೀವೇ ಹೊರತು ನಾವಲ್ಲ. ಪಾಕಿಸ್ತಾನಕ್ಕೆ ರೈಲು, ಬಸ್ ಆರಂಭಿಸಿದ್ದು ಪಾಕ್ ಜೊತೆ ಕ್ರಿಕೆಟ್ ಆಟ ಒಪ್ಪಂದ ಆರಂಭಿಸಿರುವ ನೀವು ಪ್ರತಿಭಟನಾಕಾರರನ್ನು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ನಮ್ಮ ಮೇಲೆ ದೇಶದ್ರೋಹದ ಹತ್ತು ಕೇಸು ಹಾಕಿದರೂ ನಾವು ಹೆದರುವುದಿಲ್ಲ ಎಂದರು.