ಮಂಗಳೂರು ಜ 25 : ಮೈಸೂರಿನಲ್ಲಿ ಜ.24 ರ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ’ನಾನು ಏನೆಂದು ರಾಜ್ಯದ ಜನತೆಗೆ ತಿಳಿದಿದೆ. ನನ್ನ ಹಿನ್ನಲೆ, ನಾನು ಬದುಕುತ್ತಿರುವ ರೀತಿ ರಾಜ್ಯಕ್ಕೆ ಮಾತ್ರವಲ್ಲ ದೇಶದ ಜನರಿಗೂ ತಿಳಿದಿದೆ. ಕಾರಣ ನನ್ನ ಬದುಕು ತೆರೆದ ಪುಸ್ತಕ’ ಎಂದು ಹೇಳಿಕೆ ನೀಡಿದ್ದರು. ಇದೇ ಹೇಳಿಕೆಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಕೂಡಾ ಮಾಡಿದ್ದರು. ಬಳಿಕ ಮತ್ತೊಮ್ಮೆ ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ಬಿಜೆಪಿಯೂ ಪರಿವರ್ತನಾ ಯಾತ್ರೆ ಹೆಸರಲ್ಲಿ, ಸುಳ್ಳು ಹೇಳಿದ್ರೆ ಜನ ನಂಬುತ್ತಾರೆಯೇ? ಈಗ ಮೈಸೂರು , ಮಂಡ್ಯದ, ಬೆಂಗಳೂರು ಗ್ರಾಮಾಂತರ, ಹಾಸನ, ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಎಲ್ಲಿ ಅಸ್ತಿತ್ವದಲ್ಲಿದೆ, ಬಿಜೆಪಿಗೆ ಈ ಜಿಲ್ಲೆಯಲ್ಲ್ಲಿ ಅಭ್ಯರ್ಥಿಗಳೇ ಇಲ್ಲ. ಹೀಗಾಗಿ ಇದೀಗ ನನ್ನ ಬಗ್ಗೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದಿದ್ದರು.
ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಬಿಜೆಪಿಯ ಸದಾನಂದ ಗೌಡ ,ಮುಖ್ಯಮಂತ್ರಿಗಳಿಗೆ ಅಜ್ಞಾನವೋ , ಅಪರಿಮಿತ ಜ್ಞಾನವೋ ಗೊತ್ತಿಲ್ಲ..ನೀವು ಹೇಳಿದ ಜಿಲ್ಲೆಯಲ್ಲಿ ಬಿಜೆಪಿ ಇಲ್ಲವಾದರೆ ಯಾರನ್ನಾದರೂ ಕೇಳಿ ತಿಳಿದುಕೊಳ್ಳಿ, ದೇಶದಲ್ಲಿ ನಿಮ್ಮ ಪಕ್ಷ ಪಳೆಯುಳಿಕೆಯಾಗಿ ಉಳಿದುಕೊಂಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಒಟ್ಟಾರೆ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಮುಖ್ಯಮಂತ್ರಿಗಳು ಇದೀಗ ಟ್ವೀಟ್ ಸಮರ ಸಾರಿದ್ದಾರೆ.