ಉಡುಪಿ, ಜ 3(Daijiworld News/MSP): ಪರ್ಯಾಯದ ಕೊನೆಯ ಹೊತ್ತಿಗೆ ಪಲಿಮಾರು ವಿದ್ಯಾಧೀಶ ತೀರ್ಥ ಶ್ರೀಗಳು ಕೃಷ್ಣ ಮಠದಲ್ಲಿ ಬೃಹತ್ ಸುದರ್ಶನ ಚಕ್ರವನ್ನು ಸ್ಥಾಪಿಸಿ ಭಕ್ತಾಧಿಗಳಿಗೆ ದರ್ಶನ ಭಾಗ್ಯ ಕಲ್ಪಿಸಿದ್ದಾರೆ.
ಕೃಷ್ಣ ಮಠದ ರಾಜಾಂಗಣದ ಮುಖ್ಯ ದ್ವಾರದ ಬಳಿ ಸುಮಾರು ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಮೆಂಟಿನಿಂದ ನಿರ್ಮಿಸಲಾಗಿರುವ ಸುದರ್ಶನ ಚಕ್ರದ ಪೀಠ 4 ಅಡಿ ಚಕ್ರ 8 ಅಡಿ ಇದೆ.
ಸುದರ್ಶನ ಚಕ್ರ ಕಲಾಕೃತಿ ಅನಾವರಣಗೊಳಿಸಿ ಮಾತನಾಡಿದ ಪಲಿಮಾರು ಶ್ರೀಗಳು, "ಮಠಕ್ಕೆ ಆಗಮಿಸುವ ಭಕ್ತರಿಗೆ ಈ ಸುದರ್ಶನ ಚಕ್ರ ಕಲಾಕೃತಿ ವಿಶೇಷ ಆಕರ್ಷಣೆಯಾಗಲಿದೆ ಈ ಚಕ್ರದಿಂದ ಭಕ್ತರಿಗೆ ದರ್ಶನ ಸಿಗಲಿದೆ" ಎಂದರು.
ಅಂಬಲಪಾಡಿ ಕ್ಷೇತ್ರದ ಡಾ. ವಿಜಯ್ ಬಲ್ಲಾಳ್ ಸೇವಾ ರೂಪದಲ್ಲಿ ಪಲಿಮಾರು ಪರ್ಯಾಯದ ಕೊನೆ ಘಟ್ಟದಲ್ಲಿ ಕೃಷ್ಣನಿಗೆ ಸುದರ್ಶನ ಚಕ್ರವನ್ನು ಸಮರ್ಪಿಸಿದ್ದಾರೆ. ವಿದ್ಯಾಧೀಶ ಸ್ವಾಮೀಜಿಯವರ ಆಶಯದಂತೆ ನಾನು ಈ ಚಕ್ರವನ್ನು ಸಮರ್ಪಿಸಿದ್ದೇನೆ. ದೇವರ ಅನುಗ್ರಹದಿಂದ ಮತ್ತು ಸ್ವಾಮೀಜಿಯ ಆಶೀರ್ವಾದದಿಂದ ಸಾಧ್ಯವಾಯಿತು ಎಂದರು.
ಡಾ.ವಿಜಯ್ ಬಲ್ಲಾಲ್ ಅವರ ಮಾರ್ಗದರ್ಶನದಲ್ಲಿ ಹನ್ನೆರಡು ಅಡಿ ಎತ್ತರ, ವೆಚ್ಚದ ಮೌಲ್ಯ 2 ಲಕ್ಷ ಸುದರ್ಶನನ ಚಕ್ರವನ್ನು 25 ದಿನಗಳಲ್ಲಿ ನಿರ್ಮಿಸಲಾಗಿದೆ. ಸೀತಾರಾಮ್ ಕೆಕುಡಾ, ಸ್ತಪತಿ ಗುಂಡು ರಾವ್ ಮತ್ತು ತಂಡವು ಸುಂದರವಾದ ಚಕ್ರವನ್ನು ವಿನ್ಯಾಸಗೊಳಿಸಿದೆ.