ಕಣ್ಣೂರು, ಜ 25: ಕಣ್ಣೂರು ಚಂದ್ರಾವಯಲ್ ನಲ್ಲಿ ಒಂದೇ ಕುಟುಂಬದ ಮೂವರು ಮನೆಯಲ್ಲೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ರಾಘವನ್ ( 54) , ಪತ್ನಿ ಶೋಭಾ ( 45) ಮತ್ತು ಪುತ್ರಿ ಕೆ.ವಿ ಗೋಪಿಕಾ (19) ಎಂದು ಗುರುತಿಸಲಾಗಿದೆ. ಪುತ್ರಿ ಗೋಪಿಕಾ ಮಂಚದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದರೆ , ದಂಪತಿಗಳು ನೇಣುಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರ ಪುತ್ರ ಜಿತಿನ್ ( 23) ಕಳೆದ ಸೆಪ್ಟ೦ಬರ್ ನಲ್ಲಿ ಮನೆ ಸಮೀಪ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದನು.
ಗೋಪಿಕಾ ತ್ರಿಶೂರ್ ವಿಮಲಾ ಕಾಲೇಜಿನ ಪ್ರಥಮ ವರ್ಷದ ಡಿಗ್ರಿ ವಿದ್ಯಾರ್ಥಿನಿಯಾಗಿದ್ದೂ ಕಳೆದ ಎರಡು ದಿನಗಳ ಹಿಂದೆ ಮನೆಗೆ ಬಂದಿದ್ದಳು. ಜ 24 ರ ಬುಧವಾರ ಸಂಜೆ ತನಕ ಮನೆಯಿಂದ ಯಾರೂ ಹೊರಗಡೆ ಬಾರದಿರುವುದನ್ನು ಕಂಡು ಸಂಶಯಗೊಂಡ ಪರಿಸರವಾಸಿಗಳು ಮನೆ ಬಳಿ ತೆರಳಿದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ. ಚೆರುಪ್ಪುಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.