ಉಳ್ಳಾಲ, ಜ 02 (DaijiworldNews/SM): ದೇಶಕ್ಕೆ ಗೋಡ್ಸೆ ವಿಚಾರವಾದಿಗಳಿಂದ ಸಮಸ್ಯೆಯಾಗಿದೇಯೇ ಹೊರತು ನುಸುಳುಕೋರರಿಂದಲ್ಲ ಎಂದು ವೆಲ್ಫೇರ್ ಇಂಡಿಯಾ ಫೌಂಡೇಷನ್ ನ ಸಂಚಾಲಕ ತಫ್ಲೀಲ್ ಹೇಳಿದರು. ಅವರು, ಉಳ್ಳಾಲದಲ್ಲಿ ವೆಲ್ಫೇರ್ ಇಂಡಿಯಾ ಫೌಂಡೇಷನ್ ವತಿಯಿಂದ ಮಂಗಳೂರು ಪೊಲೀಸ್ ಗೋಲಿಬಾರ್ ಪ್ರಕರಣ, ಮೃತರ ಕುಟುಂಬಕ್ಕೆ ರೂ. ೨೫ ಲಕ್ಷ ಪರಿಹಾರ ಮತ್ತು ಕುಟುಂಬದವರಿಗೆ ಸರಕಾರಿ ಉದ್ಯೋಗಕ್ಕೆ ಒತ್ತಾಯಿಸಿ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಗುರುವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಂವಿಧಾನವನ್ನು ನಾಶ ಮಾಡಲು ಹೊರಟ, ಗೋಡ್ಸೆ ವಿಚಾರವಾದಿಗಳ, ಆರ್ಥಿಕ ನೀತಿಯನ್ನು ಅಧೋಗತಿಗೆ ತಂದವರು, ಕಲಬುರ್ಗಿ ಪನ್ಸಾರೆಯಂತಹ ಸಾಹಿತಿಗಳನ್ನು ಹತ್ಯೆಗೈದ ಮನೋಭಾವದವರಿಂದ ದೇಶಕ್ಕೆ ಸಮಸ್ಯೆಯಾಗಿದೆಯೇ ಹೊರತು ನುಸುಳುಕೋರರಿಂದವಲ್ಲ ಎಂದು ಆರೋಪಿಸಿದರು.
ಅನ್ಯಾಯ, ದೌರ್ಜನ್ಯ ವಿರುದ್ಧ ಹೋರಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯ. ಅದನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ. ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಗೆ ಕಾರಣರಾದ ಕಮಿಷನರ್ ಹರ್ಷಾ ಅವರನ್ನು ಕೂಡಲೇ ರಾಜ್ಯ ಸರಕಾರ ವಜಾಗೊಳಿಸಬೇಕಿದೆ. ಇಲ್ಲದೇ ಇದ್ದಲ್ಲಿ ನೈತಿಕ ಹೊಣೆ ಹೊತ್ತು ಸ್ವತ: ಕಮೀಷನರ್ ಅವರೇ ರಾಜೀನಾಮೆ ನೀಡಲಿ. ಲಾಠಿಚಾರ್ಜ್ ನಡೆಸಿ ಗೋಲಿಬಾರ್ ನಡೆಸಿರುವುದು ಪೊಲೀಸರ ವೈಫಲ್ಯ. ಕೃತ್ಯದಲ್ಲಿ ಭಾಗಿಯಾದ ಎಲ್ಲಾ ಪೊಲೀಸರು ರಾಜೀನಾಮೆ ನೀಡಬೇಕಿದೆ ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್.ಐ ಓ ರಾಷ್ಟ್ರೀಯ ಅಧ್ಯಕ್ಷ ಲಬೀದ್ ಶಾಫಿ, ವೆಲ್ಫೇರ್ ಪಾರ್ಟಿ ದ.ಕ.ದ ಪ್ರ.ಕಾರ್ಯದರ್ಶಿ ಸರ್ಫರಾಝ್, ಜಿಲ್ಲಾ ಸಮಿತಿ ಸದಸ್ಯ ದಿವಾಕರ್ ರಾವ್, ವೆಲ್ಫೇರ್ ಪಾರ್ಟಿ ಉಳ್ಳಾಲದ ಅಧ್ಯಕ್ಷ ಹನೀಫ್ ತಲಪಾಡಿ, ಮಹಮ್ಮದ್ ಸೈಫ್, ಫಝಲ್ ಪಿಲಾರು ಉಪಸ್ಥಿತರಿದ್ದರು.