ಮಂಗಳೂರು, ಜ 02 (DaijiworldNews/SM): ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ ಆರ್ ಸಿ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ನೀತಿಗಳ ವಿರುದ್ಧ ಹಾಗೂ ಈ ಬಗ್ಗೆ ಜನಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಬ್ರಹತ್ ಸಮಾವೇಶವನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ ಎಂದು ದ.ಕ. ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ತಿಳಿಸಿದ್ದಾರೆ. ಬ್ರಹತ್ ಸಮಾವೇಶವನ್ನು ದ.ಕ. ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ ಜ.4ರಂದು ನಗರದ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿತ್ತು.
ನಗರದ ಖಾಸಗಿ ಹೊಟೇಲ್ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಸ್ಲಿಂ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ ದ.ಕ. ಜಿಲ್ಲೆಯ ೨೮ ಸಂಘಟನೆಗಳ ಸಹಯೋಗದಲ್ಲಿ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿತ್ತು. ಆದರೆ, ಇದಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅನುಮತಿ ನಿರಾಕರಿಸಿದ್ದಾರೆ. ಈ ಬಗ್ಗೆ ಸಂಘಟನೆಗಳ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು’ ಎಂದು ಹೇಳಿದರು.
‘ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಸೂಚನೆಯ ಮೇರೆಗೆ ನಗರದ ನೆಹರೂ ಮೈದಾನದಲ್ಲಿ ಸಮಾವೇಶ ನಡೆಸಲು ಅವಕಾಶವಿಲ್ಲ. ಮೈದಾನ ಹೊರತುಪಡಿಸಿ ಬೇರೆಡೆ ಆಯೋಜಿಸಲು ಪೊಲೀಸ್ ಆಯುಕ್ತರು ಸೂಚಿಸಿದ್ದರು. ಕಾನೂನನ್ನು ಕೈಗೆತ್ತಿಕೊಳ್ಳದೇ ಶಾಂತಿಯುತವಾಗಿ ಸಮಾವೇಶ ನಡೆಸಲಿದ್ದೇವೆ ಎಂದು ಸ್ಪಷ್ಟಪಡಿಸಿದರೂ ಅನುಮತಿ ನೀಡಿಲ್ಲ. ನೆಹರು ಮೈದಾನ ಹೊರತು ಪಡಿಸಿ ಬೇರೆಡೆ ಸಮಾವೇಶ ನಡೆಸಲು ನಮ್ಮ ಸಹಮತವಿಲ್ಲ. ನಾವು ನೆಹರೂ ಮೈದಾನದಲ್ಲೇ ಸಮಾವೇಶ ನಡೆಯಲಿದೆ. ಪೊಲೀಸ್ ಆಯುಕ್ತರ ಮಾತಿಗೆ ಗೌರವ ನೀಡಲಿದ್ದೇವೆ. ಇಂದಿನಿಂದ ೧೫ ದಿನಗಳ ವರೆಗೆ ಕಾಯಲಿದ್ದೇವೆ. ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಿದ್ದೇವೆ’ ಎಂದು ಮಸೂದ್ ಸ್ಪಷ್ಟಪಡಿಸಿದರು.
‘ನಗರದಲ್ಲಿ ನಡೆದ ಗೋಲಿಬಾರ್ನಲ್ಲಿ ಮೃತಪಟ್ಟ ಅಬ್ದುಲ್ ಜಲೀಲ್ ಮತ್ತು ನೌಶೀನ್ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಲಾ ೧೦ ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಇದಾದ ಎರಡು ದಿನಗಳ ಬಳಿಕ ಪರಿಹಾರ ರದ್ದುಗೊಳಿಸಿ ಆದೇಶಿಸಿದ್ದರು. ಅವರ ಈ ನಿರ್ಧಾರ ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದಲೇ ಹೇಳಿಕೆ ನೀಡಬೇಕು. ತೀರ್ಮಾನ ಕೈಗೊಳ್ಳುವ ಮೊದಲೇ ಚಿಂತಿಸಬೇಕಿತ್ತು. ಪೊಲೀಸ್ ಇಲಾಖೆಯ ವರದಿ ತರಿಸಿಕೊಂಡೇ ಮುಂದಿನ ಪ್ರಕ್ರಿಯೆ ನಡೆಸಬೇಕಿತ್ತು. ಏಕಾಏಕಿ ಪರಿಹಾರ ಘೋಷಿಸಿ ವಾಪಸ್ ಪಡೆಯುವುದು ಮುಖ್ಯಮಂತ್ರಿ ಸ್ಥಾನಕ್ಕೆ ಭೂಷಣವಲ್ಲ ಎಂದು ಟೀಕಿಸಿದರು.
ದ.ಕ. ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಇಬ್ರಾಹೀಂ ಕೊಡಿಜಾಲ್ ಮಾತನಾಡಿ, ನಗರದ ಕ್ಲಾಕ್ ಟವರ್ ಸಮೀಪ ಮಂಗಳೂರು ಮಹಾನಗರ ಪಾಲಿಕೆಯಿಂದ ಬೃಹತ್ ಗುಂಡಿ ತೆರೆದು ಕಾಮಗಾರಿ ಪ್ರಗತಿಯಲ್ಲಿದೆ. ನೆಹರೂ ಮೈದಾನದಲ್ಲಿ ಸಮಾವೇಶ ನಡೆದರೆ, ಸಮಾವೇಶದಲ್ಲಿ ಭಾಗವಹಿಸುವವರ ವಾಹನಗಳ ಪಾರ್ಕಿಂಗ್, ಸಂಚಾರ ಅಸ್ತವ್ತಸ್ಥ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎನ್ನುವ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಅನುಮತಿ ನಿರಾಕರಿಸಲಿದ್ದೇವೆ ಎಂದು ಪೊಲೀಸ್ ಆಯುಕ್ತರು ಸಬೂಬು ನೀಡಿದ್ದಾರೆ. ೧೫ ದಿನಗಳ ನಂತರ ಮತ್ತೆ ಪೊಲೀಸರಿಗೆ ಸಮಾವೇಶ ಆಯೋಜನೆಯ ಅನುಮತಿಗೆ ಮನವಿ ಸಲ್ಲಿಸಲಿದ್ದೇವೆ ಎಂದರು.
೨ ಕೋ.ರೂ. ಮೌಲ್ಯದ ಬಾಂಡ್ : ನಗರ ಪೊಲೀಸ್ ಆಯುಕ್ತರಾದ ಡಾ. ಪಿ.ಎಸ್ ಹರ್ಷ ಅವರು ಶಾಂತಿ, ಸುವ್ಯವಸ್ಥೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಸಮಾವೇಶ ಕುರಿತಂತೆ ಎರಡು ಕೋಟಿ ರೂಪಾಯಿಯ ಬಾಂಡ್ ನೀಡಲು ಸೂಚಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ದ.ಕ. ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ ಮಸೂದ್ ಅವರು, ಪೊಲೀಸ್ ಆಯುಕ್ತರು ಬಾಂಡ್ ನೀಡಲು ಸೂಚಿಸಿದ್ದಾರೆ. ಶಾಂತಿ-ಸುವ್ಯವಸ್ಥೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಎರಡು ಕೋಟಿ ರೂ. ಮೌಲ್ಯದ ಬಾಂಡ್ ನೀಡಲಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ೨೮ ಸಂಘಟನೆಗಳಿಂದ ಈ ಬಾಂಡ್ ನೀಡಲಿದ್ದೇವೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದ.ಕ. ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಹಾಜಿ ವೈ. ಅಬ್ದುಲ್ಲಾ ಕುಂಞಿ, ಹಾಜಿ ಎಸ್.ಎಂ. ರಶೀದ್, ಕಾಶಿಂ ಎಚ್.ಕೆ., ಹಾಜಿ ಮನ್ಸೂರ್ ಅಹ್ಮದ್ ಅಝಾದ್ ಮತ್ತಿತರರು ಉಪಸ್ಥಿತರಿದ್ದರು.