ಮಂಗಳೂರು, ಜ 02 (Daijiworld News/MB) : "ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನೀತಿಗಳನ್ನು ದೇಶದಲ್ಲಿ ಜಾರಿಗೆ ತರಲಾಗುತ್ತಿದೆ. ಇದರ ವಿರುದ್ಧ ಜಾತ್ಯಾತೀತ ಸಂಘಟನೆಗಳು ಒಂದಾಗಿ 2 ನೇ ಸ್ವಾತಂತ್ಯ್ರ ಹೋರಾಟ ನಡೆಸಬೇಕಾಗಿದೆ" ಮಾಜಿ ಸಚಿವ ಬಿ.ರಮಾನಾಥ ರೈ ಎಂದು ಹೇಳಿದರು.
ಮಂಗಳೂರಿನಲ್ಲಿ ನಡೆದ ಗೋಲಿಬಾರ್ ವಿರೋಧಿಸಿ ಪ್ರಗತಿಪರ ಸಂಘಟನೆಗಳು ಗುರುವಾರ ಮಂಗಳೂರಿನ ಟೌನ್ಹಾಲ್ ಮುಂಭಾಗ ಧರಣಿ ಆಯೋಜಿಸಿದ್ದು ಈ ಧರಣಿಯಲ್ಲಿ ಪಾಲ್ಗೊಳ್ಳಲು ಮಾಜಿ ಸಚಿವ ಬಿ.ರಮಾನಾಥ ರೈ ಕೆಲವು ಬೆಂಬಲಿಗರೊಂದಿಗೆ ಬಂಟ್ವಾಳದಿಂದ ಖಾಸಗಿ ಬಸ್ನಲ್ಲಿ ಆಗಮಿಸಿ ಗಮನಸೆಳೆದಿದ್ದು ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿ "ಹೋರಾಟಕ್ಕೆ ಜನರೇ ಬುನಾದಿಯಾಗಿದ್ದಾರೆ. ನಾವು ಅಹಿಂಸಾ ಮಾರ್ಗದಲ್ಲಿ ಹೋರಾಟ ನಡೆಸಬೇಕು" ಎಂದರು.
ಮಂಗಳೂರಿನಲ್ಲಿ ನಡೆದ ಘಟನೆಗಳಿಗೆ ಕಾರಣ ಯಾರು? ತಪ್ಪಿತಸ್ಥರು ಯಾರು? ಎಂಬುದು ಸ್ಪಷ್ಟವಾಗಿ ತಿಳಿಯ ಬೇಕಾದರೆ ನ್ಯಾಯಾಂಗ ತನಿಖೆ ನಡೆಸುವ ಅಗತ್ಯತೆ ಇದೆ ಎಂದು ತಿಳಿಸಿದರು.
ಈ ಘಟನೆಗೆ ಕಾಂಗ್ರೆಸ್ ಕಾರಣ ಎಂಬ ಆರೋಪಗಳನ್ನು ಮಾಡಲಾಗುತ್ತಿದ್ದು ಸತ್ಯ ತಿಳಿಯ ಬೇಕಾದರೆ ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು ಎಂದು ಆಗ್ರಹ ಮಾಡಿದರು.
ಈ ಘಟನೆ ಸರ್ಕಾರದ ಪೂರ್ವ ನಿಯೋಜಿತ ಕೃತ್ಯ, ನಮ್ಮ ಹೋರಾಟ ಅಧಿಕಾರಶಾಹಿ ವಿರುದ್ಧವಾದುದಲ್ಲ. ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಎಂದರು.
ನೋಟು ರದ್ಧತಿಯ ಸಂದರ್ಭದಲ್ಲಿ ಎಟಿಎಂ ಮುಂದೆ ಸಾಲಲ್ಲಿ ನಿಂತವರಲ್ಲೇ ಪೌರತ್ವ ಪ್ರಶ್ನಿಸುವುದು ಅವಮಾನಕಾರಿ. ಯಾರು ದೇಶದ ಪೌರರಲ್ಲ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಹೊರತಾಗಿ ಎಲ್ಲಾ ಜನರ ಪೌರತ್ವ ಪ್ರಶ್ನಿಸುವುದು ಸರಿಯಾದ ರೀತಿಯಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಕಾಂಗ್ರೆಸ್ನ ದ.ಕ.ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಅಭಯ್ ಚಂದ್ರ ಜೈನ್, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್, ಸಿಪಿಐಎಂ ಮುಖಂಡ ವಸಂತ ಆಚಾರಿ, ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲಾಯ, ಕೆ ಆರ್ ಶ್ರೀಯಾನ್, ರಘು ಎಕ್ಕಾರು, ಯುಬಿ ಲೋಕಯ್ಯ, ಶ್ಯಾಲೆಟ್ ಪಿಂಟೋ, ಕವಿತಾ ಸನಿಲ್, ಯಾದವ ಶೆಟ್ಟಿ, ಜಯಂತಿ ಬಿ ಶೆಟ್ಟಿ, ಕುಕ್ಯಾನ್, ಸುನಿಲ್ ಕುಮಾರ್ ಬಜಾಲ್, ಸಂತೋಷ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.