ಮಂಗಳೂರು, ಜ 24 : ಬಂಟ್ವಾಳದ ಕಲ್ಲಡ್ಕದಲ್ಲಿ ಬಿಜೆಪಿಯ ಪರಿವರ್ತನಾ ರ್ಯಾಲಿಯಲ್ಲಿ ಬಿಜೆಪಿ ಶಾಸಕ ಸುನೀಲ್ ಕುಮಾರ್ ಮಾತನಾಡಿ ಈ ಬಾರಿಯ ಚುನಾವಣೆ ಅಲ್ಲಾಹು ಮತ್ತು ಶ್ರೀರಾಮನ ನಡುವೆ ಎಂಬ ಹೇಳಿಕೆ ನೀಡಿದ್ದರು. ಇದನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸಿದೆ. ಈ ಬಗ್ಗೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಜನವರಿ 24 ರ ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಮಹಿಳಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಮಮತಾ ಗಟ್ಟಿ , ಮುಂಬರುವ ಚುನಾವಣೆ ಶ್ರೀರಾಮ ಮತ್ತು ಅಲ್ಲಾಹುವಿನ ನಡುವೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಜಿಲ್ಲೆಯಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಸುನೀಲ್ ಅವರು ಇಂತಹ ಹೇಳಿ ನೀಡಿ ಸಮಾಜದಲ್ಲಿ ಧಾರ್ಮಿಕ ತಾರತಮ್ಯದ ವಿಷ ಬೀಜ ಬಿತ್ತಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗುತ್ತಿಲ್ಲ, ರಮಾನಾಥ ರೈ ಅವರನ್ನು ಕ್ಷೇತ್ರದ ಜನರು ಚೆನ್ನಾಗಿ ಬಲ್ಲರು, ಹೀಗಾಗಿ ಸೋಲುವ ಭೀತಿಯಿಂದ ಹಾಗೂ ಅಮಿತ್ ಶಾ ಅವರ ನಿರ್ದೇಶನದಂತೆ ಶಾಂತಿ ಕದಡಿ ಜಿಲ್ಲೆಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದೇ ವೇಳೆ ಧಾರ್ಮಿಕ ಭಾವನೆಗೆ ನೋವುಂಟು ಮಾಡುವಂತಹ ಹೇಳಿಕೆಯನ್ನು ನೀಡಿದ ಸುನೀಲ್ ಕುಮಾರ್ ವಿರುದ್ಧ ಜಿಲ್ಲಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ವಕ್ತಾರ ಎ.ಸಿ ವಿನಯರಾಜ್, ವಿಶ್ವಾಸ್ ದಾಸ್, ಮತ್ತಿತರರು ಉಪಸ್ಥಿತರಿದ್ದರು.