ಮಂಗಳೂರು, ಜ.1(DaijiworldNews/SM): ಮಂಗಳೂರಿನ ಹಳೆ ಬಂದರಿನಿಂದ ಕಟ್ಟಡ ಸಾಮಾಗ್ರಿಗಳನ್ನು ಲಕ್ಷ ದ್ವೀಪಕ್ಕೆ ಸಾಗಾಟ ಮಾಡುತ್ತಿದ್ದ ಬ್ರಹತ್ ದೋಣಿಯೊಂದು ಲಕ್ಷದ್ವೀಪದ ಕಿಲ್ತಾನ್ ದ್ವೀಪದ ಬಳಿ ಮುಳುಗಡೆಗೊಂಡಿದ್ದು, ದೋಣಿಯಲ್ಲಿದ್ದ ಏಳು ಮಂದಿ ಕಾರ್ಮಿಕರನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ.
ಲಕ್ಷದ್ವೀಪ ಮೂಲದ ಜಾಬಿರ್ ಎಂಬವರಿಗೆ ಸೇರಿದ್ದ ‘ಫೈಸಲ್ ಹುಸೈನ್’ ಎಂಬ ಹೆಸರಿನ ಬೋಟ್ ಸೋಮವಾರ ಬೆಳಗ್ಗೆ 11 ಗಂಟೆಗೆ ಮಂಗಳೂರು ಹಳೆ ಬಂದರಿನಿಂದ 700 ಚೀಲ ಸಿಮೆಂಟ್, ಸಿಮೆಂಟ್ನಿಂದ ತಯಾರಿಸಿದ 400 ಬ್ಲಾಕ್ಇಟ್ಟಿಗೆ, 1,000 ಚೀಲ ಜಲ್ಲಿ, ಎಂ-ಸ್ಯಾಂಡ್, ಸ್ಟೀಲ್ ಹೊತ್ತುಕೊಂಡು ಈ ಬೋಟ್ ಲಕ್ಷದ್ವೀಪದ ಕಡೆಗೆ ಪ್ರಯಾಣ ಬೆಳೆಸಿತ್ತು.
ಮಂಗಳವಾರ ನಸುಕಿನಜಾವ 4 ಗಂಟೆ ಸುಮಾರಿಗೆ ದಾರಿಮಧ್ಯೆ ಬೋಟಿನೊಳಗೆ ನೀರು ನುಗ್ಗಿತು. ಇದರಿಂದ ಕಿಲ್ತಾನ್ ದ್ವೀಪದ ಬಳಿಯ ಸಮುದ್ರದಲ್ಲೇ ಬೋಟನ್ನು ಲಂಗರು ಹಾಕಲಾಯಿತಾದರೂ ಬೋಟು ಭಾಗಶಃ ನೀರಿನಲ್ಲಿ ಮುಳುಗಿತು. ಲಕ್ಷದ್ವೀಪದ ತನ್ನ ಗುರಿಯತ್ತ ತಲುಪಲು ಬೋಟು ಇನ್ನು ನಾಲ್ಕು ಗಂಟೆ ಪ್ರಯಾಣಿಸಲು ಬಾಕಿಯಿತ್ತು. ಅಷ್ಟರಲ್ಲೇ ಈ ಅವಘಡ ಸಂಭವಿಸಿದೆ.
ಘಟನೆಯ ಬಗ್ಗೆ ಕೂಡಲೇ ಲಕ್ಷದ್ವೀಪದ ಜನರಿಗೆ ಮಾಹಿತಿ ನೀಡಲಾಗಿದ್ದು, ಅಲ್ಲಿಂದ ದೋಣಿಯಲ್ಲಿ ಬಂದ ತಂಡವೊಂದು ಮುಳುಗುತ್ತಿದ್ದ ಬೋಟ್ನಲ್ಲಿದ್ದ ಎಲ್ಲ ಏಳು ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಬೋಟು ಭಾಗಶಃ ಮುಳುಗಿರುವುದರಿಂದ ದಡಕ್ಕೆ ಕೊಂಡೊಯ್ಯಲು ಅಸಾಧ್ಯ ಎಂಬ ಸ್ಥಿತಿಯಲ್ಲಿದೆ. ಅದರಲ್ಲಿದ್ದ ಲಕ್ಷಾಂತರ ರೂ. ಕಟ್ಟಡ ನಿರ್ಮಾಣ ಸಾಮಗ್ರಿಗಳು ನೀರುಪಾಲಾಗುತ್ತಿದ್ದು, ಅದು ಉಳಿಯುವ ಸಾಧ್ಯತೆ ಕಡಿಮೆಯಿದೆಯೆಂದು ತಿಳಿದು ಬಂದಿದೆ.
ಅರಬ್ಬಿ ಸಮುದ್ರ ಮಧ್ಯೆ ಇರುವ ಭಾರತದ ಭೂಪ್ರದೇಶವಾದ ಲಕ್ಷದ್ವೀಪಕ್ಕೆ ಬಹುತೇಕ ಸಾಮಗ್ರಿಗಳನ್ನು ಕೇರಳದ ಕೊಚ್ಚಿ ಮತ್ತು ಬೇಪೋರ್ ಬಂದರು ಮತ್ತು ಮಂಗಳೂರು ಹಳೆ ಬಂದರಿನಿಂದ ರವಾನೆ ಮಾಡಲಾಗುತ್ತದೆ.