ಮಂಗಳೂರು, ಜ.01 (Daijiworld News/PY) : ಕಾಂಗ್ರೆಸ್ ಪಕ್ಷ ಪ್ರಮುಖ ಮುಖಂಡರು ಸೇರಿ ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರ ಮುಖವಾಡಗಳನ್ನು ಧರಿಸಿ ಪಂಪ್ವೆಲ್ ಮೇಲ್ಸೇತುವೆಯನ್ನು ಜ.o1ರ ಬುಧವಾರದಂದು ಉದ್ಘಾಟನೆಗೊಳಿಸುವಂತೆ ಅಣಕು ಪ್ರತಿಭಟನೆ ನಡೆಸಿದರು.
ಪಂಪ್ವೆಲ್ ಫ್ಲೈಓವರ್ ನಿರ್ಮಾಣವನ್ನು ವಿಳಂಬ ಮಾಡಿದ್ದಕ್ಕಾಗಿ ಕಾಂಗ್ರೆಸ್ ಮುಖಂಡರು ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಘೋಷಣೆಗಳನ್ನು ಹೇಳಿ, ವಿಧಾನಪರಿಷತ್ ಸದಸ್ಯ ಐವನ್ ಡಿ ಸೋಜಾ ಅವರು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪ್ರತಿಮೆಗೆ ಈರುಳ್ಳಿ ಹಾರವನ್ನು ಹಾಕಿದರು.
ಬಳಿಕ ವಿಧಾನಪರಿಷತ್ ಸದಸ್ಯ ಐವಾನ್ ಡಿ ಸೋಜಾ ಮಾತನಾಡಿ, ನಳಿನ್ ಕುಮಾರ್ ಕಟೀಲ್ ಅವರು ಮೂರನೇ ಬಾರಿಗೆ ಜಿಲ್ಲೆಯ ಸಂಸದರಾಗಿ ಆಯ್ಕೆಯಾಗಿದ್ದಾರೆ ಹಾಗೂ ಎರಡು ಅವಧಿಗೆ ಎನ್ಡಿಎ ಸರ್ಕಾರ ಕೇಂದ್ರ ಸರ್ಕಾರದಲ್ಲಿ ಆಡಳಿತ ನಡೆಸುತ್ತಿದೆ. ಸಂಸದರು ಹಾಗೂ ಶಾಸಕರು ದೇಶದ ಮತ್ತು ರಾಜ್ಯದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾರೆ ಆದರೆ ಯಾರೂ ಕೂಡಾ ಮಂಗಳೂರಿನ ಅಭಿವೃದ್ಧಿಯ ಬಗ್ಗೆ.ಮಾತನಾಡುವುದಿಲ್ಲ ಎಂದು ಹೇಳಿದರು.
'ಪಂಪ್ವೆಲ್ ಫ್ಲೈಓವರ್ ಕಾಮಗಾರಿಗೆ 10 ವರ್ಷಗಳನ್ನು ತೆಗೆದುಕೊಂಡರೂ ಇನ್ನು ಪೂರ್ಣವಾಗಿಲ್ಲ, ಅದಲ್ಲದೇ ಇಂದು ಶಾಸಕರು ಟೋಲ್ ಸಂಗ್ರಹವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದು, ಬಲವಂತವಾಗಿ ತಲಪಾಡಿಯಲ್ಲಿ ಟೋಲ್ ಪಾವತಿಸಲು ತಡೆದಿದ್ದಾರೆ. ಅಂದರೆ ಅವರು ಟೋಲ್ ನೀತಿಯನ್ನು ಉಲ್ಲಂಘಿಸುತ್ತಿದ್ದಾರೆ. ಅಲ್ಲದೇ 10 ವರ್ಷಗಳಿಂದ ಜನರನ್ನು ಮೋಸಗೊಳಿಸಿದ್ದಾರೆ. ಆದ ಕಾರಣ ಬಿಜೆಪಿ ನಾಯಕರು ಮಾಡುವಂತ ನಾಟಕವನ್ನು ನಿಲ್ಲಿಸುವಂತೆ ನಾನು ಒತ್ತಾಯಿಸುತ್ತೇನೆ ಎಂದು ಐವನ್ ಡಿಸೋಜಾ ಹೇಳಿದ್ದಾರೆ.
"ಫ್ಲೈಓವರ್ ಅವೈಜ್ಞಾನಿಕವಾಗಿದೆ, ಅಲ್ಲದೇ ನಿರ್ಮಿಸಲಾದ ರೈಲ್ವೆ ಅಂಡರ್ ಪಾಸ್ ಕೂಡಾ ಅವೈಜ್ಞಾನಿಕವಾಗಿದೆ. ನವಯುಗ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ, ಆದರೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮೇಲೆ ಎಫ್ಐಆರ್ ದಾಖಲಿಸಬೇಕು, ಅವರ ದೋಷಗಳನ್ನು ಮರೆಮಾಡಲು ಕಂಪೆನಿಯವರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.