ಉಡುಪಿ, ಜ.01 (Daijiworld News/PY) : ಮಂಗಳೂರಿನ ಕೇಬಲ್ ಸುದ್ದಿವಾಹಿನಿಯ ಮಾಲಕರೊಬ್ಬರು ಡಿ.31ರ ಮಂಗಳವಾರ ಮಣಿಪಾಲ್ನಲ್ಲಿರುವ ತಮ್ಮ ನಿವಾಸದಲ್ಲಿ ಅನುಮಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮೃತರನ್ನು ಮಂಗಳೂರು ಎನ್ಎಂಸಿ ಸುದ್ದಿವಾಹಿನಿ ಮಾಲೀಕ ರೋಹಿತ್ ರಾಜ್ (53) ಎಂದು ಗುರುತಿಸಲಾಗಿದೆ.
ಮಂಗಳೂರಿನಲ್ಲಿ ಮೊದಲ ಬಾರಿಗೆ ಕೇಬಲ್ ಸುದ್ದಿವಾಹಿನಿ ಪ್ರಾರಂಭಿಸಿದ್ದ ರೋಹಿತ್ ರಾಜ್ ತಮ್ಮ ಹೆಂಡತಿಯೊಂದಿಗೆ ಮಣಿಪಾಲ್ನ ರಾಯಲ್ ಎಂಬೆಸಿ ಫ್ಲಾಟ್ನಲ್ಲಿ ವಾಸಿಸುತ್ತಿದ್ದರು.
ರೋಹಿತ್ ದಂಪತಿ ಕಳೆದ ರಾತ್ರಿ ಕಡಿಯಾಲಿ ಓಷನ್ ಪರ್ಲ್ ಹೋಟೆಲ್ನಲ್ಲಿ ನಡೆದ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮನೆಗೆ ಮರಳಿದ್ದರು. ನಂತರ ಗಂಡ ಹೆಂಡತಿ ಜಗಳವಾಡಿದ್ದು, ಇದರಿಂದ ಬೇಸರಗೊಂಡ ರೋಹಿತ್ ರಾಜ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ನಡೆದ ಸ್ಥಳಕ್ಕೆ ಮಣಿಪಾಲ ಪೊಲೀಸರು ಹಾಗೂ ವೈದ್ಯರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.