ಉಳ್ಳಾಲ, ಜ.01 (Daijiworld News/PY) : ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಮತ್ತೊಂದು ಗಡುವು ದಾಟಿದ್ದು ಈ ಹಿನ್ನಲೆಯಲ್ಲಿ ಇದನ್ನು ವಿರೋಧಿಸಿ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ನೇತೃತ್ವದಲ್ಲಿ ಕೇರಳ ಗಡಿಯಲ್ಲಿರುವ ತಲಪಾಡಿ ಟೋಲ್ ಗೇಟ್ನಲ್ಲಿ ಬಿಜೆಪಿ ಕಾರ್ಯಕರ್ತರು ಟೋಲ್ ಸಂಗ್ರಹ ಮಾಡದಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, "ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣ ಆಗುವ ಗಡುವಿನ ಕುರಿತು ಲಿಖಿತ ರೂಪದಲ್ಲಿ ತಿಳಿಸಬೇಕು ಎಂದು ಹೇಳಿದ್ದು ಆ ಹಿನ್ನಲೆಯಲ್ಲಿ ಜನವರಿ 31ರಂದು ಕಾಮಗಾರಿ ಪೂರ್ಣವಾಗುವುದಾಗಿ ಲಿಖಿತ ರೂಪದಲ್ಲಿ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಕಾಮಗಾರಿ ಪೂರ್ಣವಾಗದೆ ಟೋಲ್ ಗೇಟ್ನಲ್ಲಿ ಸುಂಕ ಸಂಗ್ರಹ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ಜನರಿಗೆ ಇದರಿಂದಾಗಿ ಅನ್ಯಾಯವಾಗಿದೆ. ಆದ್ದರಿಂದ ಈ ಒಂದು ದಿನ ಟೋಲ್ ಸಂಗ್ರಹ ಮಾಡಬಾರದು ಹಾಗೂ ಜನರಿಗೆ ಸಂಜೆ 6ಗಂಟೆಯವರೆಗೆ ಜನರಿಗೆ ಮುಕ್ತವಾದ ಅವಕಾಶವನ್ನು ಮಾಡಿಕೊಡಬೇಕು. ಕಾಮಗಾರಿ ಕೆಲಸ ಪೂರ್ಣ ಮಾಡದೆ ಇದ್ದಲ್ಲಿ ಕಾನೂನಿನ ಮೂಲಕ ಅವರಿಗೆ ಬಿಸಿ ತಟ್ಟಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ನವಯುಗ ಸಂಸ್ಥೆಯವರು ಈಗಾಗಲೇ ಸಂಸದರಿಂದ 62ಕೋಟಿ ರೂಪಾಯಿಯನ್ನು ಪಡೆದುಕೊಂಡಿದ್ದು ಇನ್ನೂ ಕಾಮಗಾರಿ ಪೂರ್ಣಮಾಡಿಲ್ಲ, ಈ ಹಿನ್ನಲೆಯಲ್ಲಿ ಒಂದು ತಿಂಗಳ ಕಾಲ ಟೋಲ್ ಸಂಗ್ರಹವನ್ನು ನಿಲ್ಲಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಬೇಕೆಂದು ನಿರ್ಧರಿಸಿಲಾಗಿತ್ತು, ಆದರೆ ಅದರಿಂದಾಗಿ ಪಂಪ್ವೆಲ್ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ, ಕಾಮಗಾರಿ ನಡೆಸುವ ಕಂಪೆನಿಯವರಿಗೆ ಆರ್ಥಿಕ ಅಡಚಣೆ ಉಂಟಾಗಿದೆ ಎಂದು ಕಣ್ಣೀರು ಹಾಕಿ ಹೇಳಿಕೊಂಡಿದ್ದಾರೆ, ಹಾಗಾಗಿ ನಾವು ಅವರಿಗೆ ತೊಂದರೆ ಮಾಡುತ್ತಿಲ್ಲ. ಆ ಹಿನ್ನಲೆಯಲ್ಲಿ ಇಂದು ಒಂದು ದಿನ ಟೋಲ್ ಸಂಗ್ರಹವನ್ನು ನಿಲ್ಲಿಸುತ್ತೇವೆ. ಆದರೂ ಕಾಮಗಾರಿ ಪೂರ್ಣವಾಗದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಗಳನ್ನು ನಡೆಸಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ.