ಮಂಗಳೂರು, ಡಿ 31 (Daijiworld News/MB) : ಪಂಪ್ವೆಲ್ ಮೇಲ್ಸೇತುವೆ ಗಡುವು ಕೊನೆಗೊಂಡ ಹಿನ್ನಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನವಯುಗ ಕಂಪೆನಿಗೆ ಎಚ್ಚರಿಕೆ ನೀಡಿದ್ದು ಕಂಪೆನಿ ಮತ್ತೊಂದು ಗಡುವು ನೀಡಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ನವಯುಗ ಕಂಪೆನಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಂಸದ ನಳಿನ್ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಕಂಪೆನಿಯು ಜನವರಿ 31 ಕ್ಕೆ ಮೇಲ್ಸೇತುವೆ ಉದ್ಘಾಟನೆ ಆಗಲಿದೆ ಎಂದು ತಿಳಿಸಿದ್ದಾರೆ.
"ನಾನು ಸಂಸದನಾಗಿ ಎಲ್ಲಾ ನೆರವನ್ನು ನೀಡಿದ್ದೇನೆ, ಆದರೂ ಕಾಮಗಾರಿ ಪೂರ್ಣವಾಗಿಲ್ಲ. ಈ ಮೇಲ್ಸೇತುವೆ ಕಾಮಗಾರಿ ಪೂರ್ಣವಾಗುವವರೆಗೂ ಟೋಲ್ ಗೇಟ್ ಮುಚ್ಚಬೇಕು. ಮುಚ್ಚದಿದ್ದಲ್ಲಿ ನಾನೇ ಮುಷ್ಕರ ಮಾಡುತ್ತೇನೆ" ಎಂದು ಎಚ್ಚರಿಕೆ ನೀಡಿದ್ದಾರೆ.
"ಈ ಕಾಮಗಾರಿ ಮುಕ್ತಾಯ ಮಾಡುವುದಾಗಿ ಐದು ಬಾರಿ ತಿಳಿಸಿದ್ದೀರಿ, ಯಾವಾಗ ಕಾಮಗಾರಿ ಅಂತ್ಯ ಮಾಡುತ್ತೀರಿ, ಈ ಕುರಿತು ಲಿಖಿತ ರೂಪದಲ್ಲಿ ತಿಳಿಸಬೇಕು. ಕಾಮಗಾರಿ ಮುಕ್ತಾಯವಾಗದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.
"ಕಾಮಗಾರಿಯ ಹಿನ್ನಲೆಯಲ್ಲಿ ಈ ಒಂದು ವರ್ಷದಲ್ಲೇ 500 ಸಭೆಗಳನ್ನು ಸೇರಲಾಗಿದೆ. ಆದರೆ ಇನ್ನೂ ಕಾಮಗಾರಿ ಮುಕ್ತಾಯವಾಗಿಲ್ಲ. ನವಯುಗ ಕಂಪೆನಿ ಅಧಿಕಾರಿಗಳ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲು ಮಾಡಲಾಗಿದೆ. ಪೊಲೀಸರು ಈ ಕಂಪೆಸಿಯ ಹಿರಿಯ ಅಧಿಕಾರಿಗಳನ್ನು ಬಂಧನ ಮಾಡಲಿ" ಎಂದು ತಿಳಿಸಿದ್ದಾರೆ.