ಸುಳ್ಯ ಜ 24: ಸುಳ್ಯ ತಾಲೂಕಿನ ತೊಡಿಕಾನದಿಂದ ಕುದುರೆಪಾಯ - ಮಾಪಳಕಜೆ- ಚೆಂಬುವಿಗೆ ಸಂಪರ್ಕ ಕಲ್ಪಿಸುವ ಅಂತರ್ ಜಿಲ್ಲಾ ಸಂಪರ್ಕ ರಸ್ತೆಯ ಅಭಿವೃದಿ ಕಾಣದೆ ನೆನೆಗುದಿಗೆ ಬಿದ್ದಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ತೊಡಿಕಾನ ದೇವಾಲಯ ಬಳಿಯಿಂದ ಮುಪ್ಪಸೇರು,ಕುದುರೆಪಾಯ - ಮಾಪಳಕಜೆ ರಸ್ತೆಯನ್ನು ಸರ್ವ ಋತು ರಸ್ತೆಯಾಗಿ ಅಭಿವೃದ್ದಿ ಪಡಿಸಬೇಕೆಂದು ಸ್ಥಳೀಯರು ಕಳೆದ 20 ವರ್ಷಗಳಿಂದ ಬೇಡಿಕೆ ಇಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ಮತ ಕೇಳಲು ಬರುವ ಅಭ್ಯರ್ಥಿಗಳು, ಪಕ್ಷದವರು ಈ ರಸ್ತೆಯನ್ನು ಸರ್ವ ಋತು ರಸ್ತೆಯನ್ನಾಗಿ ಅಭಿವೃದ್ದಿ ಪಡಿಸಿ ಕೊಡುತ್ತೇವೆ ಎಂದು ಭರವಸೆ ಕೊಡುತ್ತಾರೆ.ಆದರೆ ಚುನಾವಣೆ ಕಳೆದು ಗೆದ್ದ ಅಭ್ಯರ್ಥಿಗಳ ಬಳಿ ಹಾಗೂ ಪಕ್ಷದವರ ಬಳಿ ಈ ಭರವಸೆಯ ಬಗ್ಗೆ ನೆನಪು ಮಾಡಿದರೆ ಅವರಿಗೆ ನೀಡಿದ ಭರವಸೆ ಮರೆತು ಹೋಗಿರುತ್ತದೆ. ಹೀಗಾಗಿ ಈ ಬಾರಿ ಮತ ಕೇಳಲು ಬರುವ ರಾಜಕೀಯ ಪಕ್ಷದವರಿಗೆ ಸ್ಥಳೀಯ ಜನರು ತಕ್ಕ ಉತ್ತರ ನೀಡಲು ತಯಾರಿಯಲ್ಲಿದ್ದು ಮತದಾನ ಬಹಿಷ್ಕಾರ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.
ಇದು ಕೊಡಗು,ದಕ್ಷಿಣ ಕನ್ನಡ ಅಂತರ್ ಜಿಲ್ಲಾ ಸಂಪರ್ಕ ರಸ್ತೆಯಾಗಿರುವ ಕಾರಣ , ಈ ರಸ್ತೆ ಸರ್ವ ಋತು ರಸ್ತೆಯಾಗಿ ಅಭಿವೃದ್ದಿ ಹೊಂದಿದರೆ ಜನರಿಗೆ ಹಲುವು ಲಾಭಗಳಿಗೆ.ಅಲ್ಲದೆ ದ.ಕ ಕೊಡಗು ಜಿಲ್ಲಾ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳುತ್ತದೆ.ಕುದರೆಪಾಯ ಮತ್ತು ಮಾಪಳಕಜೆ ಭಾಗದಲ್ಲಿ ಗಿರಿಜನರೇ ಹೆಚ್ಚು ವಾಸಿಸುತ್ತಿದ್ದು ಅವರು ಕೊಡಗು ಜಿಲ್ಲೆಗೆ ಸೇರಿದವರಾಗಿದ್ದರು.ದ.ಕ ಜಿಲ್ಲೆಯ ಗಡಿಭಾಗದಲ್ಲಿದ್ದಾರೆ.ಸರಕಾರಿ ಮಟ್ಟದ ಕಚೇರಿ ಕೆಲಸಕ್ಕೆ ಮಡಿಕೇರಿ,ಸಂಪಾಜೆಗೆ ಹೋಗುತ್ತಿದ್ದು ವಾಣಿಜ್ಯ ವ್ಯವಹಾರ ದೃಷ್ಟಿಯಿಂದ ಸುಳ್ಯ ತಾಲೂಕು ಕೇಂದ್ರವನ್ನು ಆಶ್ರಯಿಸಿದ್ದಾರೆ. ಇದೀಗ ತೊಡಿಕಾನ - ಕುದುರೆಪಾಯ - ಮಾಪಳಕೆಜೆ ರಸ್ತೆಯಲ್ಲಿ ಬೇಸಿಗೆಕಾಲ ಮಾತ್ರ ವಾಹನ ಸಂಚಾರ ಇದೆ.ಮಳೆಗಾಲದಲ್ಲಿ ಈ ರಸ್ತೆಯ ಮೂಲಕ ವಾಹನ ಸಂಚಾರಿಸುವುದಿಲ್ಲ.ಮುಖ್ಯವಾಗಿ ತೊಡಿಕಾನ ದೇವಾಲಯ ಬಳಿ ಇರುವ ಮತ್ಸ್ಯ ತೀರ್ಥ ಹೊಳೆಗೆ ಕಿರು ಸೇತುವೆಯೊಂದು ನಿರ್ಮಾಣವಾಗಬೇಕಾಗಿದೆ.ಕೊಡಗಿನ ವ್ಯಾಪ್ತಿಗೆ ಬರುವ ಜಾಗದಲ್ಲಿ ಈಗಾಗಲೇ ರಸ್ತೆ ಸರ್ವ ಋತು ರಸ್ತೆಯಾಗಿ ಅಭಿವೃದ್ದಿ ಹೊಂದಿದೆ. ದ.ಕ ಜಿಲ್ಲೆಯ ವ್ಯಾಪ್ತಿಗೆ ಬರುವ ಈ ಜಾಗದ ಮತ್ಯ ತೀರ್ಥ ಹೊಳೆಗೆ ಸೇತುವೆ ನಿರ್ಮಾಣಗೊಂಡು ಡಾಮರೀಕರಣವಾದರೆ ಇದು ಸರ್ವ ಋತು ರಸ್ತೆಯಾಗಿ ಅಭಿವೃದ್ದಿಯಾಗಲು ಸಾಧ್ಯ.ಇದು ಸರ್ವ ಋತು ರಸ್ತೆಯಾಗಿ ಇದು ಅಭಿವೃದ್ದಿ ಹೊಂದದ ಕಾರಣ ಕುದುರೆಪಾಯ - ಮಾಪಳಕೆಜೆ ಭಾಗದವರು ಮಳೆಗಾದಲ್ಲಿ ಸುಳ್ಯಕ್ಕೆ ಕಲ್ಲುಗುಂಡಿ - ಅರಂತೋಡು - ಮೂಲಕ ಸಂಪರ್ಕ ಮಾಡಬೇಕಾಗಿದೆ.ಇದರಿಂದ ಸುತ್ತು ಬಳಸಿ ಹೆಚ್ಚು ಕಿ.ಮೀ ಪ್ರಯಾಣಿಸಬೇಕಾಗಿದೆ.ಅಲ್ಲದೆ ಜನರ ಶ್ರಮ, ಇಂಧನ ವ್ಯರ್ಥವಾಗುತ್ತಿದೆ.
ಈ ರಸ್ತೆ ಅಭಿವೃದ್ದಿಯಾದರೆ ದ.ಕ.ಜಿಲ್ಲೆಯ ಅತೀ ಪುರತಾನ ದೇವಾಲಯ ಶ್ರೀ ಮಲ್ಲಿಕಾರ್ಜುನ ದೇವಾಲಯ ಹಾಗೂ ಪ್ರವಾಸಿ ತಾಣ ತೊಡಿಕಾನಕ್ಕೆ ಬರುವ ಜನರ ಸಂಖ್ಯೆಯು ಹೆಚ್ಚುತ್ತದೆ.ಈ ಎಲ್ಲಾ ಕಾರಣಗಳಿಂದ ಸಂಬಂಧಪಟ್ಟ ಜನಪ್ರತಿನಿಧಿಗಳು ತೊಡಿಕಾನ -ಕುದುರೆಪಾಯ - ಮಾಪಳಕೆ ಅಂತರ್ ಜಿಲ್ಲಾ ರಸ್ತೆಯನ್ನು ಅಗತ್ಯವಾಗಿ ಅಭಿವೃದ್ದಿಪಡಿಸಬೇಕಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.