ಮಂಗಳೂರು, ಡಿ 31 (Daijiworld News/MB) : "ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಆರಂಭವಾಗಿ ಹತ್ತು ವರ್ಷಗಳಾದರೂ ಇನ್ನೂ ಪೂರ್ಣಗೊಳ್ಳದೆ ಇರುವ ಹಿನ್ನಲೆಯಲ್ಲಿ ಜನವರಿ 1ರಂದು ಸಂಜೆ ಮೇಲ್ಸೇತುವೆಯ ಅಣಕು ಉದ್ಘಾಟನೆ ಮಾಡಲಾಗುವುದು" ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ತಿಳಿಸಿದ್ದಾರೆ.
ಮಂಗಳವಾರ ಮೇಲ್ಸೇತುವೆ ಕಾಮಗಾರಿಯ ಕುರಿತು ಪರಿಶೀಲನೆ ನಡೆಸಲು ಸ್ಥಳಕ್ಕೆ ಭೇಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಸಂಶೋಧನಾ ಸಮಿತಿಯಲ್ಲಿದ್ದ ಅವರು ಮಾಧ್ಯಮಕ್ಕೆ ಈ ವಿಷಯವನ್ನು ತಿಳಿಸಿದ್ದಾರೆ.
"ದಕ್ಷಿಣ ಕನ್ನಡ ಸಂಸದರು ಜನವರಿ ಪ್ರಥಮ ವಾರದಲ್ಲಿ ಮೇಲ್ಸೇತುವೆ ಉದ್ಘಾಟನೆಯಾಗಲಿದೆ ಎಂದು ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ನಿಗದಿಪಡಿಸಿದ ಗಡುವಿನ ಪ್ರಕಾರ ಈ ಮೇಲ್ಸೇತುವೆಯ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ವಿಫಲವಾದ ಹಿನ್ನಲೆಯಲ್ಲಿ ಜನವರಿ 1ರಂದು ಸಾರ್ವಜನಿಕರ ಮೂಲಕ ಈ ಮೇಲ್ಸೇತುವೆಯ ಅಣಕು ಉದ್ಘಾಟನೆ ನಡೆಯಲಿದೆ" ಎಂದು ಐವನ್ ಡಿಸೋಜಾರವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, "ಜನರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಮೇಲ್ಸೇತುವೆಯ ಕಾಮಗಾರಿ ಹತ್ತು ವರ್ಷಗಳಿಂದ ನಡೆಯುತ್ತಿದ್ದರೂ ಇನ್ನೂ ಪೂರ್ಣಗೊಳಿಸಲು ಆಗಿಲ್ಲ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಇನ್ನೂ ಪೂರ್ಣಗೊಂಡಿಲ್ಲ. ಇಂತಹ ವಿಚಾರಗಳ ಬಗ್ಗೆ ಗಮನ ಹರಿಸದ ಸಂಸದರು ಅಭವೃದ್ಧಿಯ ವಿಚಾರದಲ್ಲಿ ಜನರ ಹಾದಿ ತಪ್ಪಿಸುತ್ತಿದ್ದಾರೆ" ಎಂದು ಟೀಕೆ ಮಾಡಿದರು.
ಮಾಜಿ ಶಾಸಕ ಜೆ. ಆರ್ ಲೊಬೋ ಮಾತನಾಡಿ, "ಈ ಮೇಲ್ಸೇತುವೆ ಕಾಮಗಾರಿ ಅಸಮರ್ಪಕವಾಗಿದ್ದು ನಿಗದಿತ ಎತ್ತರವಿಲ್ಲದ ಕಾರಣ ಸೇತುವೆಯ ಅಡಿ ಭಾಗದಲ್ಲಿ ಆಳ ಮಾಡಲು ಮುಂದಾಗಿದ್ದಾರೆ. ಪಡೀಲ್ ಕೆಳ ಸುರಂಗ ಮಾರ್ಗವೂ ಇದೇ ರೀತಿ ಆಗಿದೆ. ಹಾಗೆಯೇ ಮಂಗಳೂರು- ಕಾರ್ಕಳ ಹೆದ್ದಾರಿ ಕಾಮಗಾರಿ ಮಂಜೂರಾಗಿದ್ದು ಪ್ರಗತಿ ಕಂಡು ಬಂದಿಲ್ಲ. ನಂತೂರು, ಕೆಪಿಟಿ ವೃತ್ತದ ಯೋಜನೆಯ ವಿಚಾರವೇ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಕೆ. ಅಭಯ ಚಂದ್ರ ಜೈನ್, ಮನಪಾ ಸದಸ್ಯರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜಾ, ಸಮಿತಿಯ ಸದಸ್ಯರಾದ ವಿಶ್ವಾಸ್ ದಾಸ್, ನಾಗೇಂದ್ರ, ನಝೀರ್ ಬಜಾಲ್, ಅಬ್ದುಲ್ ರಾವೂಫ್ ಉಪಸ್ಥಿತರಿದ್ದರು.