ಉಡುಪಿ, ಡಿ (DaijiworldNews/SM): ಕೃಷ್ಣ ಮಠದೊಳಗೆ ಮುಸಲ್ಮಾನ ಬಾಂಧವರನ್ನು ಆಹ್ವಾನಿಸಿ ಸೌಹಾರ್ದತೆ ಮೆರೆದವರು ಅಪ್ಪಟ ಹಿಂದೂವಾದಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು. ದೇವಸ್ಥಾನದಲ್ಲಿ ಇಫ್ತಾರ್ ಕೂಟ ಆಯೋಜಿಸಿದ ಸಂದರ್ಭದಲ್ಲಿ ಶ್ರೀಗಳು ಹಲವು ರೀತಿಯಲ್ಲಿ ಟೀಕೆಗೆ ಗುರಿಯಾಗಿದ್ದರು. ಆದರೆ, ಯಾರಿಗೂ ಯಾವುದೇ ರೀತಿಯಲ್ಲಿ ಪ್ರತ್ಯುತ್ತರ ನೀಡದೆ ಶಾಂತ ರೀತಿಯಲ್ಲಿ ಪರಿಸ್ಥಿತಿಯನ್ನು ಶ್ರೀಗಳು ನಿಭಾಯಿಸಿದ್ದರು.
ಆ ಮೂಲಕ ಪೊಡವಿಗೊಡೆಯನ ನಾಡಿನಲ್ಲಿ ಸೌಹಾರ್ದತೆಯ ಬೀಜವನ್ನು ಶ್ರೀಗಳು ಬಿತ್ತಿದರು. ಅಪಾರ ಜ್ಞಾನ ಹೊಂದಿದ್ದ ಶ್ರೀಗಳು ಉಡುಪಿ ಮಾತ್ರವಲ್ಲದೆ ಎಲ್ಲಡೆ ಉತ್ತಮ ಬಾಂಧವ್ಯ ಹೊಂದಿದ್ದರು. ಅದೇ ಕಾರಣದಿಂದಾಗಿ ಇಫ್ತಾರ್ ಕೂಟ ಆಯೋಜಿಸಿದ ಸಂದರ್ಭದಲ್ಲಿ ಉಂಟಾದ ವಿವಾದ ಶೀಘ್ರ ಶಮನಕ್ಕೆ ಅವರಿಂದ ಸಾಧ್ಯವಾಯಿತು.
ಇನ್ನು ಶ್ರೀಗಳ ಕಾರು ಚಾಲಕನಾಗಿದ್ದವರು ಕೂಡ ಓರ್ವ ಮುಸ್ಲಿಂ. ಪೇಜಾವರ ಶ್ರೀಗಳ ಕಾರು ಚಾಲಕರಾಗಿ ಮಹಮ್ಮದ್ ಅಖಿರ್ ಮೂರು ವರ್ಷ, ಮಹಮ್ಮದ್ ಮನ್ಸೂರ್ ಏಳು ವರ್ಷ, ನಂತರ ಮಹಮ್ಮದ್ ಆರೀಫ್ ಕಾರು ಚಾಲಕನಾಗಿ ಕೆಲಸ ಮಾಡಿದ್ದರು.