ಮಂಗಳೂರು, ಜ 23 : ಶಿರಾಡಿಘಾಟ್ ಭಾಗದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು. ಇದೀಗ ರಾಷ್ಟ್ರೀಯ ಹೆದ್ದಾರಿ 275 ರ ಮಡಿಕೇರಿ ಮಾರ್ಗದಲ್ಲೂ ಘನ ವಾಹನ ನಿಷೇಧಿಸಿ ಕೊಡಗು ಜಿಲ್ಲಾಧಿಕಾರಿ ಪಿ.ಐ ಶ್ರೀ ವಿದ್ಯಾ ಆದೇಶ ಹೊರಡಿಸಿದ್ದಾರೆ. ಶಿರಾಡಿ ಘಾಟ್ ನಲ್ಲಿ ರಸ್ತೆ ದುರಸ್ತಿಗಾಗಿ ವಾಹನ ಸಂಚಾರ ನಿಷೇದಿಸಿದ ನಂತರ ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೊ ಕಂಟೈನರ್ಸ್, ಲಾಂಗ್ ಚಾಸೀ, ರಾಜಹಂಸ, ಐರಾವತ ಮತ್ತು ಖಾಸಗಿ ಲಕ್ಸುರಿ ಬಸ್ ಮುಂತಾದ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ರಾ.ಹೆ.-275ರ ಸಂಪಾಜೆ-ಮಡಿಕೇರಿ-ಕುಶಾಲನಗರ ಮಾರ್ಗವಾಗಿ ಸಂಚರಿಸುತ್ತಿತ್ತು.
ಕೊಡಗು ಜಿಲ್ಲೆಯ ರಸ್ತೆಗಳು ತೀವ್ರ ಕಡಿದಾದ ತಿರುವುಗಳು ಹಾಗೂ ಏರಿಳಿತಗಳಿಂದ ಕೂಡಿದ್ದು, ಈ ರಸ್ತೆಯಲ್ಲಿ ಭಾರೀ ವಾಹನಗಳು ಅಂದರೆ ಬುಲೆಟ್ ಟ್ಯಾಂಕರ್ಸ್, ಷಿಪ್, ಕಾರ್ಗೊ ಕಂಟೈನರ್ಸ್, ಲಾಂಗ್ ಚಾಸೀಸ್ (ಮಲ್ಟಿಆಕ್ಸಿಲ್) ವಾಹನ ಇತ್ಯಾದಿಗಳು ಸಂಚರಿಸಿದಲ್ಲಿ ಹೆಚ್ಚಿನ ಸಂಚಾರದ ಒತ್ತಡದಿಂದ ಆಪಘಾತಗಳುಂಟಾಗುವ ಸಂಭವನೀಯತೆ ಹೆಚ್ಚಿದೆ.
ಸಾರ್ವಜನಿಕ ಮತ್ತು ರಸ್ತೆ ಸುರಕ್ಷತೆಗೆ ಧಕ್ಕೆಯಾಗುವ ಸಂಭವವಿರುವುದರಿಂದ ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆ-ಮಡಿಕೇರಿ-ಸುಂಟಿಕೊಪ್ಪ-ಕುಶಾಲನಗರ ಮಾರ್ಗದಲ್ಲಿ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಭಾರೀ ವಾಹನಗಳ ಸಂಚಾರವನ್ನು ಜನವರಿ 20 ರಿಂದ ಮುಂದಿನ ಆದೇಶವರೆಗೆ ನಿರ್ಬಂಧಿಸಿ, ಕೊಡಗು ಜಿಲ್ಲಾಧಿಕಾರಿ ಪಿ.ಐ ಶ್ರೀ ವಿದ್ಯಾ ಆದೇಶ ಹೊರಡಿಸಿದ್ದಾರೆ.