ಮಂಗಳೂರು, ಡಿ 29(Daijiworld News/PY) : "ಮಂಗಳೂರಿನ ಹಿಂಸಾಚಾರದ ವೇಳೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಹಾಗೂ ಗೋಲಿಬಾರ್ನಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಪೊಲೀಸರು ಅನುಮತಿ ಇಲ್ಲದೇ ಆಸ್ಪತ್ರೆಗೆ ನುಗ್ಗಿ ಬೆದರಿಸಿ ಹಿಂಸಿಸಿದ್ದಾರೆ" ಎಂದು ಅಶ್ರಫ್ ತಿಳಿಸಿದ್ದಾರೆ.
ಡಿ.19ರಂದು ಮಂಗಳೂರಿನಲ್ಲಿ ಪೌರತ್ವ ಕಾಯ್ದೆಯ ವಿರುದ್ದ ನಡೆದ ಹಿಂಸಾಚಾರದ ವೇಳೆ ಪೊಲೀಸರು ಲಾಠಿ ಚಾರ್ಜ್ ಹಾಗೂ ಗೋಲಿಬಾರ್ ನಡೆಸಿದ್ದರು, ಇದರಿಂದ ಗಾಯಗೊಂಡ ನನ್ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಘಾ ಘಟಕದಲ್ಲಿ ದಾಖಲಿಸಿದ್ದರು. ಬಳಿಕ ಆಸ್ಪತ್ರೆಯ 2ನೇ ಮಹಡಿ ರೂಂ ನಂ-215ಕ್ಕೆ ವರ್ಗಾಯಿಸಲಾಗಿತ್ತು. ಅಲ್ಲದೇ ನನ್ನ ಆರೋಗ್ಯದ ದೃಷ್ಟಿಯಿಂದ ವ್ಯಕ್ತಿಗಳು ಭೇಟಿ ನೀಡುವುದನ್ನು ನಿರ್ಭಂಧಿಸಲಾಗಿತ್ತು.
"ಡಿ.25ರ ಮಧ್ಯರಾತ್ರಿ ಸುಮಾರು 1 ಗಂಟೆಯ ವೇಳೆ ಏಕಾಏಕಿ 4-5 ಜನ ಪೊಲೀಸರು ಬಾಗಿಲನ್ನು ಬಡಿದು ನಾನು ದಾಖಲಾಗಿದ್ದ ಕೊಠಡಿಗೆ ನುಗ್ಗಿ ಬೆದರಿಸುವ ರೀತಿಯಲ್ಲಿ ನಮ್ಮ ಕೊಠಡಿಯ ವಿಡೀಯೋ ಚಿತ್ರೀಕರಣ ಮಾಡಿಹೋಗಿದ್ದಾರೆ, ಈ ಘಟನೆಯಿಂದಾಗಿ ನಾನು, ನನ್ನ ಹೆಂಡತಿ, ಹಾಗೂ ನನ್ನ ಅಕ್ಕನ ಮಗ ವಾಸಿಮ್ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದೆವು" ಎಂದು ಅಶ್ರಫ್ ತಿಳಿಸಿದ್ದಾರೆ.
"ಪೊಲೀಸರು ಈ ರೀತಿ ಅನುಮತಿಯಿಲ್ಲದೆಯೇ ರಾತ್ರೋರಾತ್ರಿ ಕೊಠಡಿಗೆ ಏಕಾಏಕಿ ನುಗ್ಗಿ ನಮ್ಮ ಖಾಸಗಿತನದ ದಕ್ಕೆ ಮಾಡಿದ್ದು ಅಲ್ಲದೇ ಬೆದರಿಸುವ ರೀತಿಯಲ್ಲಿ ವಿಡೀಯೋ ಚಿತ್ರೀಕರಣ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರ ಮೇಲೆ ಸೂಕ್ತವಾದ ಕಾನೂನು ಕ್ರಮಕೈಗೊಳ್ಳಬೇಕು" ಎಂದು ಅಶ್ರಫ್ ಆಗ್ರಹಿಸಿದ್ದಾರೆ.
"ಡಿ.19ರಂದು ನಡೆದ ಘಟನೆಯಿಂದಾಗಿ ನನಗೆ ಮಾರಣಾಂತಿಕ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ, ಆದ್ದರಿಂದ ನೇರವಾಗಿ ಬಂದು ದೂರು ನೀಡಲು ಆಗದೇ ಇಂದು ರಿಜಿಸ್ಟರ್ ಪೋಸ್ಟ್ ಮೂಲಕ ಈ ವಿಚಾರವಾಗಿ ದೂರನ್ನು ನೀಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.