ಮಂಗಳೂರು, ಡಿ 28 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ಹಿನ್ನಲೆಯಲ್ಲಿ ಕೇರಳದಿಂದ ಬರುವ ವಿದ್ಯಾರ್ಥಿಗಳ ಮೇಲೆ ನಿಗಾ ಇರಿಸಿ ಎಂದು ಕರ್ನಾಟಕ ಸರಕಾರ ಸುತ್ತೋಲೆ ಹೊರಡಿಸಿದ್ದು ಅದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಕರ್ಫ್ಯೂ ಸಂದರ್ಭ ಹಾಸ್ಟೆಲ್ ಬಿಟ್ಟು ತಮ್ಮೂರಿಗೆ ತೆರಳುತ್ತಿರುವ ವಿದ್ಯಾರ್ಥಿಗಳ ಚಿತ್ರ
ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜು ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕಿ, ಜಿಲ್ಲಾಧಿಕಾರಿಯ ಆಜ್ಞೆಯ ಮೇರೆಗೆ ಡಿಸೆಂಬರ್ 19 ರಂದು ಈ ಸುತ್ತೋಲೆಯನ್ನು ಹೊರಡಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಅವರು, "ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಈ ಸುತ್ತೋಲೆಯನ್ನು ರಚಿಸುವಾಗ ತಪ್ಪಾಗಿದ್ದು , ವಿದ್ಯಾರ್ಥಿಗಳ ರಕ್ಷಣೆಯ ಹಿತಾದೃಷ್ಟಿಯಿಂದ ಈ ಸುತ್ತೋಲೆಯನ್ನು ಕಳುಹಿಸಲಾಗಿದೆ" ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಹಿನ್ನಲೆಯಲ್ಲಿ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಸಿಎನ್ ಅಶ್ವತ್ ನಾರಾಯಣ್ ಹೇಳಿದ್ದಾರೆ.
ಆದರೆ ಈ ಸುತ್ತೋಲೆಯನ್ನು ಹಲವು ರಾಜಕೀಯ ಪಕ್ಷಗಳು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ತೀವ್ರ ಖಂಡನೆ ಮಾಡಿದ್ದು ಇದು ತಾರತಮ್ಯ ಎಂದು ವಿರೋಧಿಸಿದ್ದಾರೆ.
ಕೇರಳದಿಂದ ಕರ್ನಾಟಕಕ್ಕೆ ಹಲವು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಬರುತ್ತಾರೆ. ಈಗಾಗಲೇ ಮಂಗಳೂರನ್ನು ಕೋಮು ಸಂವೇದನಾಶೀಲ ಪ್ರದೇಶ ಎಂದು ಬಿಂಬಿಸಲಾಗುತ್ತಿದೆ. ಈಗ ಈ ಸುತ್ತೋಲೆಯಿಂದ ಕೇರಳದಿಂದ ಮಂಗಳೂರಿಗೆ ವಿದ್ಯಾರ್ಥಿಗಳು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕೆಲವು ಶಿಕ್ಷಣ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಕರಾವಳಿಯ ಜಿಲ್ಲೆಗಳಲ್ಲಿ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಈ ಪೈಕಿ ಸುಮಾರು 15% ರಿಂದ 20% ಕೇರಳದವ ಮೂಲದ ವಿದ್ಯಾರ್ಥಿಗಳಾಗಿದ್ದಾರೆ.
ಈ ಸುತ್ತೋಲೆಯ ಕುರಿತು ಮಾತನಾಡಿದ ಕಾಂಗ್ರೆಸ್ನ ಎಂಎಲ್ಸಿ ಐವನ್ ಡಿಸೋಜಾ ಈ ಸುತ್ತೋಲೆ ಬಹಳ ಆಘಾತಕಾರಿಯಾದದ್ದು ಹಾಗೂ ನಾಚಿಕೆಗೇಡಿನ ಸಂಗತಿ ಎಂದು ಹೇಳಿ ಖಂಡನೆ ವ್ಯಕ್ತ ಪಡಿಸಿದ್ದಾರೆ.
ಮೇರಿಟ್ ಆಧಾರದಲ್ಲಿ ಶಾಲಾ-ಕಾಲೇಜುಗಳಲ್ಲಿ ಪ್ರವೇಶ ಪಡೆದ ಹೊರ ರಾಜ್ಯದ ವಿದ್ಯಾರ್ಥಿಗಳ ವಿರುದ್ಧ ಮಾಡುವ ತಾರತಮ್ಯವಾಗಿದೆ. ಇಂತಹ ಸುತ್ತೋಲೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ಸರಕಾರವು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯತುವ ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ನೇರವಾಗಿ ಭಾಗಿಯಾಗಿದೆ ಎಂದು ಈ ಸುತ್ತೋಲೆಯ ಮೂಲಕ ತಿಳಿದು ಬಂದಿದೆ ಎಂದು ಆರೋಪಿಸಿದ್ದಾರೆ.
"ಮುಂದಿನ ಶಾಸಕಾಂಗ ಅಧಿವೇಶನದಲ್ಲಿ ನಾನು ಈ ವಿಚಾರದ ಕುರಿತು ಮಾತನಾಡುತ್ತೇನೆ. ಕೇರಳದ ವಿದ್ಯಾರ್ಥಿಗಳು ಕೂಡಾ ಭಾರತದ ಪ್ರಜೆಗಳು. ಹಾಗಿರುವಾಗ ಅಂತಹ ತಾರತಮ್ಯದ ಸುತ್ತೋಲೆಯನ್ನು ಯಾಕೆ ಹೊರಡಿಸಬೇಕು? ಪ್ರತಿಭಟನೆ ಮಾಡಲು ಮುಂದಾಗುವ ವಿದ್ಯಾರ್ಥಿಗಳ ಹಕ್ಕನ್ನು ಯಾಕೆ ಹತ್ತಿಕ್ಕಬೇಕು" ಎಂದು ಪ್ರಶ್ನಿಸಿದ್ದಾರೆ.
ಈ ಸುತ್ತೋಲೆಯ ವಿಚಾರದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, "ಸುತ್ತೋಲೆಯನ್ನು ಓದದೆಯೇ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಹಿಂಸಾಚಾರದಿಂದಾಗಿ ನಗರದ ಮೇಲೆ ಋಣಾತ್ಮಕ ಅಭಿಪ್ರಾಯಗಳು ಬರುತ್ತಿದೆ. ಈ ಹಿನ್ನಲೆಯಲ್ಲಿ ಕೇರಳದಿಂದ ಶಿಕ್ಷಣಕ್ಕಾಗಿ ಕರ್ನಾಟಕಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಬಹುದು , ಇದರಿಂದಾಗಿ ರಾಜ್ಯದ ಆರ್ಥಿಕತೆಗೆ ಹೊಡೆತ ಬೀಳುತ್ತದೆ ಎಂದು ಹೇಳಿದ್ದಾರೆ.