ಮಂಗಳೂರು ಜ 23 : ಮುಸ್ಲಿಂ ಸಮುದಾಯದ ಹಾಗೂ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಸಿದ್ದರಾಮಯ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವ್ಯಾಚವಾಗಿ ನಿಂದಿಸಿ, ಅಶ್ಲೀಲ ಭಾವಚಿತ್ರಗಳನ್ನು ಹರಿಯಬಿಟ್ಟ ವಾಟ್ಸಾಪ್ ಗ್ರೂಪ್ ಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಯುವ ಕಾಂಗ್ರೆಸ್, ಮಿಥುನ್ ರೈ ನೇತೃತ್ವದಲ್ಲಿ ನಗರ ಪೊಲೀಸ್ ಆಯುಕ್ತ ಆರ್. ಸುರೇಶ್ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ, ಮಿಥುನ್ ರೈ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಮುಖಂಡರ ಬಗ್ಗೆ ಮತ್ತು ಮುಸ್ಲಿಂ ಸಮುದಾಯವನ್ನು ಅವಾಚ್ಯವಾಗಿ ನಿಂದಿಸುವುದನ್ನು ಯುತ್ ಕಾಂಗ್ರೆಸ್ ಖಂಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲವರು ಜಿಲ್ಲೆಯಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ. ಇಸ್ಲಾಂ ಸಮುದಾಯ ಮತ್ತು ಕಾಂಗ್ರೆಸ್ ನಾಯಕರ ಬಗ್ಗೆ ಅಶ್ಲೀಲ ಚಿತ್ರಗಳನ್ನು, ’ಕರಾವಳಿ ರಾಜಕೀಯ ಚರ್ಚೆ’ ಮತ್ತು ’ಕರುನಾಡ ರಾಜಕೀಯ ಕದನ’ ಎಂಬ ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿಯಬಿಡಲಾಗಿದೆ. ಇದು ಮುಸ್ಲಿಂ ಸಮುದಾಯ ಮತ್ತು ಕಾಂಗ್ರೆಸ್ಸಿಗರ ಭಾವನೆಗೆ ನೋವುಂಟು ಮಾಡಿದೆ ಹೀಗಾಗಿ ಆರೋಪಿಗಳನ್ನು ಬಂಧಿಸಿ ಕಠಿಣವಾದ ಕ್ರಮ ತೆಗೆದುಕೊಳ್ಳಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ. ಈ ಹಿಂದೆಯೂ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿರುವುದಕ್ಕೆ ಮೂರು ಸಾರಿ ದೂರು ಸಲ್ಲಿಸಿದ್ದೇವೆ. ಆದರೆ ಇನ್ನು ಮುಂದೆ ಆರೋಪಿಗಳನ್ನು ಬಂಧಿಸಿ ಕೋರ್ಟ್ ಗೆ ಕರೆತರುವಾಗ ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ಅವರು ಎಚ್ಚರಿಸಿದರು.