ಮಂಗಳೂರು, ಡಿ 28 (Daijiworld News/MB) : "ತಾಯಿ ತನ್ನ ಹರೆಯದ ಮಗನನ್ನು ಕಳೆದುಕೊಂಡಿದ್ದಾರೆ. ನಾವಿಲ್ಲಿಗೆ ಬಂದಿರುವುದು ಕೇವಲ ಸಂತಾಪ ಹೇಳಲಷ್ಟೆ. ವಿಶ್ವದಾದ್ಯಂತ ತಾಯಂದಿರಿಗೆ ಇರುವುದು ಒಂದೇ ಧರ್ಮ, ಅದೇ ಮಾತೃಧರ್ಮ" ಎಂದು ತೃಣಮೂಲ ಕಾಂಗ್ರೆಸ್ ನ ಮಾಜಿ ರೈಲ್ವೆ ಸಚಿವ ದಿನೇಶ್ ದ್ವಿವೇದಿ ಹೇಳಿದರು.
ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್ನಲ್ಲಿ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡಿ ಸಾಂತ್ವನ ಹೇಳಲು ಟಿಎಂಸಿ ನಿಯೋಗ ಮಂಗಳೂರಿಗೆ ಬಂದಿದ್ದು ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಮೃತ ಕುಟುಂಬದವರಿಗೆ ಈ ಘಟನೆಯಿಂದಾಗಿ ಆಘಾತವಾಗಿದೆ. ಭಾರತ ಈ ದೇಶದ ಯುವಕನೋರ್ವನನ್ನು ಕಳೆದುಕೊಂಡಿದೆ" ಎಂದು ಹೇಳಿದರು.
"ನಾವು ಇಲ್ಲಿಗೆ ಯಾವುದೇ ಪತ್ರಿಕಾಗೋಷ್ಠಿ, ರಾಜಕೀಯ ನಡೆಸಲು ಬಂದಿಲ್ಲ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇವೆ, ಪರಿಹಾರ ನೀಡಿದರೆ ಮೃತರ ಜೀವವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಪರಿಹಾರ ನೀಡುವುದು ಏಕತೆಯ ಸಂಕೇತ, ನಾವು ಮೃತರ ಕುಟುಂಬದೊಂದಿಗೆ ಇದ್ದೇವೆ ಎಂಬುದರ ಪ್ರತೀಕ" ಎಂದು ಹೇಳಿದರು.
"ನಾವು ಈ ದೇಶಕ್ಕೆ ಶಾಂತಿ ತರುವತ್ತ ಹೆಜ್ಜೆ ಹಾಕೋಣ. ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೆ ದಯವಿಟ್ಟು ನಿಮ್ಮ ಅಹಂ ಅನ್ನು ಬಿಡಿ. ನಾವೆಲ್ಲರೂ ಸಹೋದರರಿದ್ದಂತೆ. ಪೌರತ್ವ ತಿದ್ದುಪಡಿ ವಿಚಾರದ ಸಮಸ್ಯೆಯನ್ನು ನಾವು ಜೊತೆ ಸೇರಿ ಬಗೆಹರಿಸೋಣ" ಎಂದು ಮನವಿ ಮಾಡಿದರು.
"ಮೃತರ ತಾಯಿಯು ನಮಗೆ ನ್ಯಾಯ ಬೇಕು ಎಂದು ಮಾತ್ರ ಹೇಳಿದರು. ನಮಗೆ ನ್ಯಾಯ ಬೇಕಿದೆ. ಮೃತ ಕುಟುಂಬಕ್ಕೆ ನ್ಯಾಯ ಬೇಕಿದೆ" ಎಂದು ಹೇಳಿದರು.