ಮಂಗಳೂರು, ಡಿ 27 (Daijiworld News/MSP): ಮಳೆಗಾಲದಲ್ಲಿ ಊಂಟಾದ ಹಾನಿಯಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ದ,ಕ ಜಿಲ್ಲಾಡಳಿತವೂ ನ.14 ರವರೆಗೆ ಸಂಚಾರ ನಿಷೇಧಿಸಿತ್ತು, ನಂತರ ನ.27ರ ಬಳಿಕ ಹಗಲಿನಲ್ಲಿ ಮಾತ್ರ ಲಘು ವಾಹನ ಓಡಾಟಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಸಾರ್ವಜನಿಕರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ಮಿನಿ ಬಸ್ ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ.
ಚಾರ್ಮಾಡಿ ಘಾಟಿ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ, ಇಲಾಖೆ ಹಾಗೂ ಚಿಕ್ಕಮಗಳೂರು ಕೆ ಎಸ್ ಆರ್ ಟಿ ಸಿ ಜಂಟಿಯಾಗಿ ನ.19ರಂದು ನಡೆಸಿದ ಸರ್ವೆಯ ಬಳಿಕ ಈ ಮಿನಿ ಬಸ್ ಸಂಚಾರಕ್ಕೆ ಅಸ್ತು ಎಂದಿದೆ. ಹೀಗಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಒಪ್ಪಿಗೆ ಮೇರೆಗೆ ಉಡುಪಿ, ಮಂಗಳೂರು, ಧರ್ಮಸ್ಥಳದಿಂದ ಇನ್ನು ಒಟ್ಟಾರೆ 6 ಬಸ್ ಗಳು ದಿನನಿತ್ಯ ಓಡಾಟ ನಡೆಸಲಿದೆ.
ಇದಲ್ಲದೇ ಚಾರ್ಮಾಡಿ ಘಾಟ್ ರಸ್ತೆ ದುರಸ್ತಿ ಕಾಮಗಾರಿ ಹಿನ್ನೆಲೆ ಇಂದಿನಿಂದ ಘನ ವಾಹನಗಳ ಸಂಚಾರಕ್ಕೆ ನಿಷೇಧ ಮಾಡಲಾಗಿದೆ. ಕಾರು, ಮಿನಿ ಟೆಂಪೋ ಹಾಗೂ ಮಿನಿ ಕೆ.ಎಸ್.ಆರ್.ಟಿ.ಸಿ ಬಸ್ಗಳಿಗೆ ಮಾತ್ರ ಈ ರಸ್ತೆಯಲ್ಲಿ ಸಂಚರಿಸುವ ಅವಕಾಶ ಕಲ್ಪಿಸಲಾಗಿದೆ. ಘನ ವಾಹನಗಳಾದ ಟ್ಯಾಂಕರ್, ರಾಜಹಂಸ ಬಸ್ ಸೇರಿದಂತೆ ಇತರೆ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಈ ವ್ಯವಸ್ಥೆ ಜಾರಿಯಲ್ಲಿದೆ.
ಮುಂದಿನ ಆದೇಶದವರೆಗೂ ಪರ್ಯಾಯ ರಸ್ತೆ ಮೂಲಕ ತೆರಳಲು ನಿರ್ದೇಶನ ನೀಡಲಾಗಿದೆ. ಕಾರ್ಕಳ-ಸಂಸೆ-ಕುದುರೆಮುಖ ರಸ್ತೆ ಮತ್ತು ಶಿರಾಡಿ ರಸ್ತೆಗ ಮೂಲಕ ಪ್ರಯಾಣಿಕರು ತೆರಳಲು ಅವಕಾಶ ಮಾಡಲಾಗಿದೆ. ಚಾರ್ಮಾಡಿ ಘಾಟ್ ಮಂಗಳೂರು-ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಈ ವರ್ಷ ಮಲೆನಾಡು ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟ್ನಲ್ಲಿ ಪದೇ ಪದೇ ಭೂ ಕುಸಿತ ಉಂಟಾಗಿತ್ತು. ಹೀಗಾಗಿ ಆಗಸ್ಟ್ ತಿಂಗಳಿಂದ ಚಾರ್ಮಾಡಿ ಘಾಟ್ನಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಇದೀಗ ಸಾರ್ವಜನಿಕರ ಹಿತದೃಷ್ಟಿಯಿಂದ ಇಂದಿನಿಂದ ಮಿನಿ (ಲಘು) ವಾಹನಗಳ ಸಂಚಾರ ಆರಂಭವಾಗಿದೆ. ಆದರೆ ಯಾವುದೇ ಘನ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ ಎಂದು ದ.ಕ ಜಿಲ್ಲಾಧಿಕಾರಿ ಸಿಂದೂ ಬಿ,ರೂಪೇಶ್ ಆದೇಶ ಹೊರಡಿಸಿದ್ದಾರೆ.