ಮಂಗಳೂರು, ಡಿ 27 (Daijiworld News/MB) : "ಕಾಂಗ್ರೆಸ್ ಮಂಗಳೂರನ್ನು ಗೂಂಡಾ ರಾಜ್ಯವನ್ನಾಗಿ ಮಾಡಲು ಹೊರಟಿದೆ. ಗೂಂಡಾ ರಾಜ್ಯವನ್ನಾಗಿ ಕಾಂಗ್ರೆಸ್ ಹಾಗೂ ಖಾದರ್ ಅವರ ಈ ಪ್ರಯತ್ನವನ್ನು ನಾವು ವಿಫಲಗೊಳಿಸುತ್ತೇವೆ" ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
ಉಡುಪಿ ಜಿಲ್ಲಾ ಪ್ರವಾಸಕ್ಕೆಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಮಂಗಳೂರಿನ ವಿಷಯದ ಕುರಿತು ಬೇರೆ ಜಿಲ್ಲೆಯವರು ತಲೆ ಹಾಕಬೇಡಿ ಎಂದು ಯುಟಿ ಖಾದರ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ , "ಕಾಂಗ್ರೆಸ್ ಮಂಗಳೂರನ್ನು ಗೂಂಡಾ ರಾಜ್ಯವನ್ನಾಗಿ ಮಾಡಲು ಹೊರಟಿದೆ. ಅದಕ್ಕಾಗಿ ಖಾದರ್ ಈ ರೀತಿ ಹೇಳಿಕೆ ನೀಡುತ್ತಾರೆ. ಕಾಶ್ಮೀರದ ಹಾಗೆಯೇ ಮಂಗಳೂರಿನಲ್ಲಿ 370 ವಿಧಿ ಇದೆಯಾ? ಮಂಗಳೂರು ಅಖಂಡ ಭಾರತದ ಭಾಗವಲ್ಲವೇ? ನಾವು ಕಾಶ್ಮೀರವನ್ನೇ ಬಿಟ್ಟಿಲ್ಲ ಇನ್ನೂ ಮಂಗಳೂರನ್ನು ಬಿಡುತ್ತೇವಾ?" ಎಂದು ಪ್ರಶ್ನಿಸಿದರು.
"ಕರ್ನಾಟಕವನ್ನು ಗೂಂಡಾಗಳು ತಮ್ಮ ರಾಜ್ಯ ಎಂದು ತಿಳಿದು ಕೊಂಡಿದ್ದಾರೆ. ಆದರೆ ನಾವು ಕರ್ನಾಟಕವನ್ನು ಗೂಂಡಾ ರಾಜ್ಯವನ್ನಾಗಿ ಮಾಡಲು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಸರಕಾರ ಸಾರ್ವಜನಿಕ ಆಸ್ತಿ ನಷ್ಟ ಮಾಡಿದ ಗೂಂಡಾಗಳನ್ನೇ ವೈಯಕ್ತಿಕವಾಗಿ ಹೊಣೆಗಾರನ್ನಾಗಿಸುವ ಚಿಂತನೆ ನಡೆಸಿದೆ" ಎಂದು ತಿಳಿಸಿದರು.
ಗೋಲಿಬಾರ್ನಲ್ಲಿ ಮೃತಪಟ್ಟವರಿಗೆ ಘೋಷಸಲಾಗಿದ್ದ ಪರಿಹಾರ ತಡೆ ಹಿಡಿದ ವಿಚಾರಕ್ಕೆ ಸಂಬಂಧಿಸಿ, "ಗೋಲಿಬಾರ್ನಲ್ಲಿ ಮೃತಪಟ್ಟವರನ್ನು ಅಮಾಯಕರು ಎಂದು ಕರುಣೆಯಿಂದ ಪರಿಹಾರ ಘೋಷಣೆ ಮಾಡಲಾಗಿತ್ತು. ಆದರೆ ತನಿಖೆ ನಡೆಸಿದಾಗ ಅವರ ಮೇಲೆ ಆರೋಪಗಳು ಇರುವುದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಪರಿಹಾರ ವಾಪಾಸ್ ತಡೆ ಹಿಡಿಯಲಾಗಿದೆ. ಅವರು ಈ ಪ್ರಕರಣದಲ್ಲಿ ಅಮಾಯಕರು ಎಂದು ಸಾಬೀತು ಆದಲ್ಲಿ ಅವರ ಕುಟುಂಬಕ್ಕೆ ಪರಿಹಾರ ನೀಡಲಾಗುವುದು" ಎಂದು ಆಶ್ವಾಸನೆ ನೀಡಿದರು.
ಇನ್ನೂ ಡಿಕೆ ಶಿವಕುಮಾರ್ ಯೇಸು ಪ್ರತಿಮೆ ನಿರ್ಮಾಣ ಮಾಡಲಿರುವ ವಿಚಾರದಲ್ಲಿ ಮಾತನಾಡಿ, " ಡಿಕೆ ಶಿವಕುಮಾರ್ ಅವರು ಶಾಂತಿ ಮಂತ್ರ ಸಾರುವ ನಿಟ್ಟಿನಲ್ಲಿ ಯೇಸು ಪ್ರತಿಮೆ ನಿರ್ಮಾಣ ಮಾಡಿದರೆ ಸ್ವಾಗತ, ಆದರೆ ಅವರು ಕ್ರೈಸ್ತರ ಮತಗಳನ್ನು ಪಡೆಯುವ ಸಲುವಾಗಿ ಈ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅಲ್ಲಿ ಯಾವ ಹಿಂದುಗಳು ಇರಲಿಲ್ಲವಾ?, ಅವರು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಬಹುದಿತ್ತು. ಆದಿ ಚುಂಚನಗಿರಿ ಸ್ವಾಮೀಜಿ ಪ್ರತಿಮೆ ನಿರ್ಮಾಣ ಮಾಡಬಹುದಿತ್ತು. ಸೋನಿಯಾ ಗಾಂಧಿಯವರನ್ನು ಮೆಚ್ಚಿಸುವ ಸಲುವಾಗಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಸೋನಿಯಾ ಗಾಂಧಿಯನ್ನು ಮೆಚ್ಚಿಸಲು ಹೋದ್ರೆ ಸಿದ್ಧರಾಮಯ್ಯನಿಗೆ ಆದ ಗತಿಯೇ ಇವರಿಗೂ ಆಗುತ್ತದೆ" ಎಂದು ಹೇಳಿದರು.
ಕನಕಪುರದ ಕಪಾಲಿ ಬೆಟ್ಟದಲ್ಲಿ ವಿಶ್ವದಲ್ಲೇ ಅತಿ ಎತ್ತರದ ಯೇಸು ಪ್ರತಿಮೆ (114 ಅಡಿ) ನಿರ್ಮಿಸಲು ಡಿಕೆ ಶಿವಕುಮಾರ್ ಅವರು ಅಡಿಗಲ್ಲು ಹಾಕಿದ್ದು ಡಿಕೆ ಶಿವಕುಮಾರ್ ಸ್ವಂತ ಹಣದಲ್ಲಿ ಈ ಪ್ರತಿಮೆ ನಿರ್ಮಿಸಲು ಮುಂದಾಗಿದ್ದಾರೆ. ಈ ವಿಚಾರ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.