ಮಂಗಳೂರು, ಡಿ 27 (Daijiworld News/MB) : ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ತನಿಖೆಯನ್ನು ನಡೆಸಲು ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಷಹಾಪುಲ್ವಾಲ ನೇತೃತ್ವದ ತಂಡ ಗುರುವಾರ ಮಂಗಳೂರಿಗೆ ಆಗಮಿಸಿದೆ.
ರಾಜ್ಯ ಸರಕಾರವು ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಾಗೂ ಮ್ಯಾಜಿಸ್ಟೀರಿಯಲ್ಗೆ ವಹಿಸಿದ್ದು ಸಿಐಡಿ ತನಿಖೆಯ ಸಲುವಾಗಿ ಮಂಗಳೂರಿಗೆ ಆಗಮಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸರು 12 ಮಂದಿಯನ್ನು ಬಂಧಿಸಿದ್ದು, 30ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ನಡೆಸಿದ್ದಾರೆ. ಹಿಂಸಾಚಾರ ನಡೆದ ನೆಲ್ಲಿಕಾಯಿ ರಸ್ತೆ, ಬಂದರು, ಬೀಬಿ ಅಲಾಬಿ ರಸ್ತೆ, ರಾವ್ ಆಂಡ್ ರಾವ್ ಸರ್ಕಲ್, ಅಜೀಜುದ್ದೀನ್ ರಸ್ತೆ ಸೇರಿದಂತೆ ಸುತ್ತಮುತ್ತ ಪ್ರದೇಶಗಳ ಸಿಸಿಟಿವಿ ಕ್ಯಾಮೆರಾಗಳ ಚಿತ್ರಣವನ್ನು ವಶಕ್ಕೆ ಪಡೆದಿದ್ದು ಸಾಮಾಜಿಕ ಜಾಲತಾಣದಲ್ಲಿದ್ದ ದಾಖಲೆಗಳನ್ನು ಸಂಗ್ರಹ ಮಾಡಿದ್ದಾರೆ. ಈ ಎಲ್ಲಾ ದಾಖಲೆಗಳನ್ನು ಸಿಐಡಿ ತಂಡ ವಶಕ್ಕೆ ಪಡೆದುಕೊಂಡು ತನಿಖೆ ನಡೆಸಲಿದೆ.
ಸಿಐಡಿ ಎಸ್ಪಿ ರಾಹುಲ್ ಕುಮಾರ್ ತಂಡದಲ್ಲಿ ಒಟ್ಟು ಐವರು ಅಧಿಕಾರಿಗಳಿದ್ದು, ತನಿಖೆಯನ್ನು ಶುಕ್ರವಾರ ಆರಂಭ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ತಂಡವು ಘಟನೆ ನಡೆದ ಸ್ಥಳದ ಮಹಜರು ಮಾಡಿ ಮಾಹಿತಿ ಪಡೆಯಲಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ನಾಳೆ ಮ್ಯಾಜಿಸ್ಟೀರಿಯಲ್ ತನಿಖೆ ಆರಂಭವಾಗಲಿದೆ. ಈ ತನಿಖೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ನಡೆಯಲಿದೆ. ಈ ತನಿಖೆಗೆ ಮೂರು ತಿಂಗಳ ಕಾಲ ನೀಡಲಾಗಿದೆ.
ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆರೋಪಿಗಳ ಪತ್ತೆ ಮಾಡಲು ಈಗಾಗಲೇ ಎಸಿಪಿ, ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ಒಟ್ಟು 10 ತಂಡಗಳನ್ನು ರಚನೆ ಮಾಡಲಾಗಿದ್ದು ಈ ತಂಡಗಳು ಕಾರ್ಯ ನಿರ್ವಹಿಸುತ್ತಿದೆ.