ಬಂಟ್ವಾಳ, ಡಿ 27 (Daijiworld News/MSP): ಹಿಂದಿನ ಸಾಲಿನಲ್ಲಿ ಅನುಮೋದನೆಗೊಂಡು ತಡೆ ಹಿಡಿಯಲ್ಪಟ್ಟ ಬಂಟ್ವಾಳ ಕ್ಷೇತ್ರದ 6 ರಸ್ತೆಗಳ ಅಭಿವೃದ್ಧಿಗೆ ಸಮ್ಮಿಶ್ರ ಸರಕಾರದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ತನ್ನ ಮನವಿ ಮೇರೆಗೆ 8 ಕೋ.ರೂ.ಗಳನ್ನು ಮಂಜೂರು ಮಾಡಿರುತ್ತಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸ್ಪಷ್ಟಪಡಿಸಿದರು.
ತಾಲೂಕಿನ ಪಂಜಿಕಲ್ಲಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಂಟ್ವಾಳ ವಿ.ಕ್ಷೇತ್ರದ ಕೆಲವೊಂದು ರಸ್ತೆಗಳ ಅಭಿವೃದ್ಧಿಯ ಕುರಿತು ಜನರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯ ಮಾಡಲಾಗುತ್ತಿದೆ. ಆದರೆ ತಾನು ಯಾವತ್ತೂ ಮಾಡದ ಕಾಮಗಾರಿಗಳನ್ನು ತನ್ನದೆಂದು ಹೇಳಿಲ್ಲ. ಆದರೆ ಈಗ ನನ್ನ ಬಗ್ಗೆ ಸುಳ್ಳು ಅಪಪ್ರಚಾರ ಮಾಡಲಾಗುತ್ತಿದ್ದು, ಹೀಗಾಗಿ ತಾನು ನಂಬಿರುವ ಪಂಜಿಕಲ್ಲು ಗರಡಿಯಲ್ಲಿ ಪ್ರಾರ್ಥನೆ ಮಾಡಿಯೇ ಈ ವಿಚಾರವನ್ನು ತಿಳಿಸುತ್ತಿದ್ದೇನೆ. ತಡೆ ಹಿಡಿಯಲಾಗಿರುವ ಅನುಮೋದನೆಗಳ ಕುರಿತು ಸಚಿವ ರೇವಣ್ಣ ಅವರ ಬಳಿ ಹೇಳಿದಾಗ, ಅವರು ಸಂಬಂಧಪಟ್ಟ ಎಂಜಿನಿಯರ್ಗಳ ಮೂಲಕ ಒಂದು ಬಾರಿ ಅಭಿವೃದ್ಧಿ(ವನ್ ಟೈಮ್ ಡೆವಲಪ್ಮೆಂಟ್) ಯೋಜನೆ ಮೂಲಕ 8 ಕೋ.ರೂ.ನೀಡಿದ್ದಾರೆ.
ಅದರಲ್ಲಿ ನೆಲ್ಲಿಗುಡ್ಡೆ-ಕೆದ್ದಳಿಕೆ-ಎನ್.ಸಿ.ರೋಡು ರಸ್ತೆ ಹಾಗೂ ಮಾಣಿಯ ದಡಿಕೆಮಾರ್-ಬಾಕಿಲ ರಸ್ತೆಗೆ ತಲಾ 1 ಕೋ.ರೂ, ಸಿಆರ್ಎಫ್ ನಿಧಿಯ ಮೂಲಕ ಅಭಿವೃದ್ಧಿಗೊಂಡು ಬಾಕಿ ಉಳಿದಿದ್ದ ಅಣ್ಣಳಿಕೆ-ಕರಿಮಲೆ ರಸ್ತೆಗೆ ಪ್ರಾರಂಭದಲ್ಲಿ 1.40 ಕೋ.ರೂ.ಮಂಜೂರಾಗಿ ಬಳಿಕ ಅದನ್ನು 2 ಕೋ.ರೂ.ಗಳಿಗೆ ಏರಿಕೆ ಮಾಡಲಾಗಿದೆ. ಮಧ್ವ-ಬರ್ಕಟ-ಪೆರುಮಾರು ಮತ್ತು ಕಾಜೊಟ್ಟು-ಕೊಪ್ಪಳದೊಟ್ಟು ರಸ್ತೆ ಅಭಿವೃದ್ಧಿಗೆ 70 ಲಕ್ಷ ರೂ., ಸರಪಾಡಿಯ ಬಜ-ಬಲಯೂರು ರಸ್ತೆಗೆ 40 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ. ಇದಲ್ಲಿ ಒಂದು ಸೇತುವೆಯನ್ನು ಸೇರಿಸಿಕೊಳ್ಳಲಾಗಿದ್ದು, ಆದರೆ ಅದಕ್ಕೆ ಅವಕಾಶವಿಲ್ಲದ ಕಾರಣ ಅದನ್ನು ಬೇರೆ ರಸ್ತೆಗೆ ಉಪಯೋಗಿಸಲಾಗಿದೆ ಎಂದರು.
ಈ ರಸ್ತೆಗಳ ಜತೆಗೆ ಬಂಟ್ವಾಳ ಕ್ಷೇತ್ರದ ಇತರ ರಸ್ತೆಗಳಿಗೂ ಅನುದಾನ ಬಿಡುಗಡೆಗೊಂಡಿದ್ದು, ಆದರೆ ಈ 8 ಕೋ.ರೂ.ಗಳ ಅನುದಾನ ತನ್ನ ಪ್ರಯತ್ನದಲ್ಲೇ ಮಂಜೂರಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಅದರ ದಾಖಲೆಗಳು ಕೂಡ ತನ್ನ ಬಳಿ ಇದೆ. ರಸ್ತೆ ಅಭಿವೃದ್ಧಿಯ ಕುರಿತು ಪಂಜಿಕಲ್ಲಿನಲ್ಲಿ ಅಳವಡಿಸಲಾದ ಬ್ಯಾನರೊಂದನ್ನು ಕೂಡ ಹರಿಯಲಾಗಿದ್ದು, ಅದು ಅವರ ಮನಸ್ಥಿತಿಯನ್ನು ಹೇಳುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಸದಸ್ಯರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಪ್ರಮುಖರಾದ ಜಗದೀಶ್ ಕೊಯಿಲ, ಯತೀಶ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ಸುರೇಶ್ ಪೂಜಾರಿ, ಕೃಷ್ಣರಾಜ್ ಪಂಜಿಕಲ್ಲು ಮೊದಲಾದವರಿದ್ದರು.