ಮೂಲ್ಕಿ ಜ 23 : ಇಲ್ಲಿನ ಹಳೆಯಂಗಡಿಯಲ್ಲಿ ರಿಕ್ಷಾ ಚಾಲಕರಾಗಿದ್ದ ಸಾಗ್ ಬಳಿಯ ನಿವಾಸಿ ಸಾದಿಕ್ (40) ಚೆನ್ನಪಟ್ಟಣದಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಜ 22 ರ ಸೋಮವಾರ ನಡೆದಿದೆ. ಹಳೆಯಂಗಡಿ ಮೂಲದ ಆರು ಮಂದಿಯಿದ್ದ ಒಮ್ನಿ ಕಾರು ಹಾಗೂ ಲಾರಿಯ ನಡುವೆ ಸಂಭವಿಸಿದ ಅಪಘಾತದಲ್ಲಿ ಈ ದುರ್ಘಟನೆ ಸಂಭವಿಸಿದೆ.
ತಮಿಳುನಾಡಿನ ಮುತ್ತುಪೇಟೆ ಮತ್ತಿತರ ಪ್ರದೇಶದ ವಿವಿಧ ದರ್ಗಾಗಳಿಗೆ ಭೇಟಿ ನೀಡಿ ಸೋಮವಾರ ಹಿಂದುರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ ಹಳೆಯಂಗಡಿ ಸಾಗ್ ನಿವಾಸಿ ಸಾದಿಕ್ (40) ಹಾಗೂ ಅವರೊಂದಿಗೆ ಒಮ್ನಿಯಲ್ಲಿ ಸಹ ಪ್ರಯಾಣಿಕರಾಗಿ ಸಂಚರಿಸುತ್ತಿದ್ದ ಸಾದಿಕ್ರವರ ಪತ್ನಿ ಉಮಾಬಾನು (35) ಇವರ ಪುತ್ರ ಮುಸ್ತಾಫ (6) ಹಾಗೂ ಇವರ ಜೊತೆಗೆ ತೆರಳಿದ್ದ ಸ್ಥಳೀಯ ಕದಿಕೆ ಕಲ್ಲಾಡಿ ನಿವಾಸಿಗಳಾದ ಅಬ್ದುಲ್ ರೆಹಮಾನ್ (45) ಅವರ ಪತ್ನಿ ಖೈರುನ್ನುಸಾ (32) ಇವರ ಪುತ್ರಿ ರೆಹನಾ (18) ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಿಯವಾಗಿ ಪ್ರಾಮಾಣಿಕ ರಿಕ್ಷಾ ಚಾಲಕನೆಂದೇ ಗುರುತಿಸಿಕೊಂಡಿದ್ದ ಸಾದಿಕ್ ತನ್ನ ಸ್ನೇಹಿತ ಅಬ್ದುಲ್ ರೆಹಮಾನ್ರೊಂದಿಗೆ ಕಿರು ಪ್ರವಾಸಕ್ಕೆ ತಮ್ಮ ಓಮ್ನಿಯಲ್ಲಿಯೇ ತೆರಳಿದ್ದಾಗ ಈ ದುರ್ಘಟನೆ ನಡೆದಿದೆ. ಮೃತ ಸಾದಿಕ್ ಶೋಕಾರ್ಥ ಹಳೆಯಂಗಡಿ ರಿಕ್ಷಾ ಚಾಲಕರು ಒಂದು ತಾಸು ಹರತಾಳ ನಡೆಸಿದರು.