ಮಂಗಳೂರು, ಡಿ 26 (Daijiworld News/PY) : ಮಂಗಳೂರು ಗಲಭೆಯಲ್ಲಿ ಆಸ್ತಿಪಾಸ್ತಿ ನಷ್ಟವಾದ ಹಿನ್ನಲೆ ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯ ಸರ್ಕಾರ ನಡೆದುಕೊಳ್ಳಬೇಕು, ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡಿದ ದಂಧೆಕೋರರ ಆಸ್ತಿಯನ್ನು ಜಪ್ತಿ ಮಾಡಬೇಕು, ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇನೆ ಎಂದು ಮಂಗಳೂರಿನಲ್ಲಿ ಸಿ ಟಿ ರವಿ ಹೇಳಿದ್ದಾರೆ.
ಮಂಗಳೂರಿನ ದ.ಕ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಡಿ.26ರ ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿ.ಟಿ ರವಿ,
ತ್ರಿವಳಿ ತಲಾಖ್, 370ನೆ ವಿಧಿ ರದ್ದು, ಬಾಬರಿ ರಾಮಮಂದಿರ ತೀರ್ಪು ಇತ್ಯಾದಿ ಸಂದರ್ಭದಲ್ಲಿ ದೇಶಾದ್ಯಂತ ಗದ್ದಲವಾಗಬಹುದೆಂದು ಕಾಂಗ್ರೆಸ್ಸಿಗರು ಭಾವಿಸಿದ್ದರು. ಆದರೆ, ಎಲ್ಲೂ ಏನೂ ಆಗಿಲ್ಲ. ಈ ಮಧ್ಯೆ ಸಿಎಎ ಅನುಷ್ಠಾನಕ್ಕೆ ಸಿದ್ಧತೆ ನಡೆಯತೊಡಗಿದಾಗ ಕಾಂಗ್ರೆಸ್ ಗಲಭೆಗೆ ಸಂಚು ಹೂಡಿತು. ಅದಕ್ಕೆ ಕೆಲವು ವಿಚಾರವಾದಿಗಳು, ಅರಾಜಕ ಶಕ್ತಿಗಳನ್ನೂ ಕೂಡ ಬಳಸಿಕೊಂಡಿತು. ಒಟ್ಟಿನಲ್ಲಿ ಸಿಎಎ ನೆಪದಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದೆ ಎಂದರು.
ಕಾಂಗ್ರೆಸ್, ಎಸ್ಡಿಪಿಐ, ಪಿಎಫ್ಐ ಒಳ ಒಪ್ಪಂದ ಮಾಡಿಕೊಂಡಿವೆ. ಅದರ ಪರಿಣಾಮವಾಗಿಯೇ ಎಲ್ಲೆಡೆ ಹಿಂಸಾಚಾರ ನಡೆಯುತ್ತಿದೆ. ಮಂಗಳೂರಿನ ಗಲಭೆಯಲ್ಲಿ ಅದು ಸಾಬೀತಾಗಿದೆ. ಮಾಜಿ ಸಚಿವ ಯು.ಟಿ.ಖಾದರ್ರ ‘ಬೆಂಕಿ’ಯ ಮಾತು ಕೂಡ ಅದಕ್ಕೆ ಸಾಕ್ಷಿಯಾಗಿದೆ. ಖಾದರ್ ಹೀಗೆ ಹೇಳಿದರೂ ಕಾಂಗ್ರೆಸ್ ಯಾಕೆ ವೌನ ವಹಿಸಿದೆ ಎಂದು ಸಿ.ಟಿ.ರವಿ ಪ್ರಶ್ನಿಸಿದ್ಧಾರೆ.
ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಅಮಾಯಕರು ಸತ್ತರೆ ಪರಿಹಾರ ನೀಡುತ್ತೇವೆ, ಹಿಂಸಾಚಾರದಲ್ಲಿ ಭಾಗಿಯಾಗಿದ್ದರೆ ಅವರಿಗೆ ಪರಿಹಾರ ಕೊಡಲು ಸಾಧ್ಯವಿಲ್ಲ. ತನಿಖೆಯಿಂದ ಅವರು ಆರೋಪಿಗಳೋ, ಅಮಾಯಕರೋ ಎಂದು ತಿಳಿಯುತ್ತದೆ ಎಂದರು.