ಮಂಗಳೂರು, ಡಿ 26 (Daijiworld News/MSP): ಮಂಗಳೂರಿನಲ್ಲಿ ಡಿ.19 ರ ಗುರುವಾರ ನಡೆದ ಹಿಂಸಾರೂಪ ತಾಳಿದ ಪ್ರತಿಭಟನೆಯನ್ನು ಹತೋಟಿಗೆ ತರುವಲ್ಲಿ ಶ್ರಮಿಸಿದ ಪೊಲೀಸರಿಗೆ ರಾಜ್ಯ ಸರ್ಕಾರದಿಂದ ನಗದು ಬಹುಮಾನ ನೀಡಲಾಗಿದೆ ಎಂದು ರಾಜ್ಯ ಪೊಲೀಸ್ ಇಲಾಖೆ ಪ್ರಕಟನೆ ಮಾಡಿದೆ ಬಿಂಬಿಸಿ ಎಂದು ಕಿಡಿಗೇಡಿಗಳು ಸುಳ್ಳುಸುದ್ದಿ ಹರಿಯಬಿಟ್ಟಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ, ಡಾ. ಪಿ ಎಸ್ ಹರ್ಷ " ಕೆಲವು ಕಿಡಿಗೇಡಿಗಳು ನೈಜ ವಿಚಾರವನ್ನು ಮರೆಮಾಚಿ , ವಿವಿಧ ರೀತಿಯ ವದಂತಿಗಳನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಮತ್ತು ಪೊಲೀಸ್ ಇಲಾಖೆಯ ನಡುವಿನ ಅಧಿಕೃತ ಸಂವಹನವನ್ನು ಇಂತಹ ಪ್ರಕಟಣೆಯ ಮೂಲಕ ತಪ್ಪಾಗಿ ನಿರೂಪಿಸಲು ದುಷ್ಕರ್ಮಿಗಳು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸುಳ್ಳು ಮಾಹಿತಿಯ ಆಧಾರದ ಮೇಲೆ ವದಂತಿಗಳನ್ನು ಹರಡುವುದನ್ನು ತಡೆಯಬೇಕು ಎಂದು ಮನವಿ ಮಾಡುತ್ತೇನೆ" ಎಂದು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.
ಆಯುಕ್ತರು ಇನ್ನೊಂದು ಸಂದೇಶದಲ್ಲಿ " ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿದ ಎಲ್ಲಾ ಪೊಲೀಸರನ್ನು ನಾನು ಪ್ರಶಂಸಿಸುತ್ತೇನೆ. ಕಷ್ಟಕರ ಪರಿಸ್ಥಿತಿಯಲ್ಲಿ ಕರ್ತ್ಯವ್ಯ ನಿರ್ವಹಿಸಿದ ಪೊಲೀಸರನ್ನು ಹಲವಾರು ಸಿಬ್ಬಂದಿಯನ್ನು ಭೇಟಿಯಾಗಿ ಮಾತನಾಡಿ ಮೆಚ್ಚುಗೆ ಸೂಚಿದ್ದೇನೆ" ಎಂದು ಹೇಳಿದ್ದಾರೆ
ಮಂಗಳೂರಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಶ್ರಮಿಸಿದ ಪೊಲೀಸ್ ಇಲಾಖೆಯ ಸುಮಾರು 149 ಪೊಲೀಸರಿಗೆ ಒಟ್ಟಾರೆ 10 ಲಕ್ಷ ನಗದು ಬಹುಮಾನ ಘೋಷಿಸಿತ್ತು ಎಂದು ನಕಲಿ ಪ್ರಕಟನೆ ಹೊರಡಿಸಿ ವೈರಲ್ ಮಾಡಲಾಗಿತ್ತು.