ಮಂಗಳೂರು, ಜ 22 : ಕಾಂಗ್ರೆಸ್ ಮುಖಂಡ ಬಿ. ಜನಾರ್ಧನ ಪೂಜಾರಿ ಅವರ ಬಹುನಿರೀಕ್ಷಿತ ’ಸಾಲ ಮೇಳದ ಸಂಗ್ರಾಮ ’- ಅತ್ಮಕಥೆ ಪುಸ್ತಕ , ಜ. 26 ರ ಗಣರಾಜ್ಯೋತ್ಸವದಂದು ಸಂಜೆ ಕುದ್ರೋಳಿ ದೇವಸ್ಥಾನದ ಸಂತೋಷಿ ಕಲಾ ಮಂಟಪ ಬಿಡುಗಡೆಯಾಗಲಿದೆ. ಈ ಬಗ್ಗೆ ಕುದ್ರೋಳಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ , ಬಿ. ಜನಾರ್ಧನ ಪೂಜಾರಿ, ಈ ಪುಸ್ತಕವನ್ನು ತನ್ನನ್ನು ಪ್ರೀತಿಸಿದ, ಬೆಂಬಲಿಸಿದ, ಸಹಾಯ-ಸಹಕಾರ ನೀಡಿದ ಜನತೆಯ ಮುಂದೆ ತಾನೇ ಖುದ್ದು ಬಿಡುಗಡೆ ಮಾಡುತ್ತೇನೆ ಎಂದರು. ಬಿಡುಗಡೆಗೂ ಮೊದಲು ಕುದ್ರೋಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ , ಪುಸ್ತಕವನ್ನು ಹೊತ್ತು ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಪ್ರದಕ್ಷಿಣೆ ಬಂದು ಆ ಬಳಿಕ ಬಿಡುಗಡೆ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿಸಿದರು. ಸುಮಾರು 210 ಪುಟಗಳ ಪುಸ್ತಕದಲ್ಲಿ 9 ಅಧ್ಯಾಯಗಳನ್ನು ಒಳಗೊಂಡಿದೆ. ಪುಸ್ತಕವನ್ನು ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಮಾಡುವ ಇರಾದೆ ಇದೆ, ಲಕ್ಷ್ಮಣ ಕೋಡ್ಸೆ ನನ್ನ ಮಾತುಗಳನ್ನು ಬರವಣಿಗೆ ರೂಪಕ್ಕೆ ಇಳಿಸಿದ್ದಾರೆ ಎಂದು ಹೇಳಿದರು.
ಸಾಲ ಮೇಳದ ಸಂಗ್ರಾಮ ಎಂಬ ನಾಮಾಂಕಿತ ಆತ್ಮಕಥೆ ಪುಸ್ತಕದಲ್ಲಿ, ಬಾಲ್ಯದ ಜೀವನದ ಕಷ್ಟದ ಅನುಭವ, ವಿದ್ಯಾಭ್ಯಾಸಕ್ಕಾಗಿ ನಾನು ಎದುರಿಸಬೇಕಾದ ಸವಾಲುಗಳು, ವಕೀಲ ವೃತ್ತಿಯಲ್ಲಿ ಅನುಭವಿಸಿದ ಜೀವನದ ಪಾಠ, ಇಂದಿರಾ ಗಾಂಧಿಯವರೊಂದಿಗೆ ಒಡನಾಟ, ರಾಜಕೀಯ ಚದುರಂಗದಾಟದಲ್ಲಿ ಬೆಳೆದು ನಿಂತ ರೀತಿ, ಸವಿವರವಾಗಿ, ಸತ್ಯದ ಜತೆ ರಾಜಿ ಮಾಡಿಕೊಳ್ಳದೆ ನೇರವಾಗಿ ತೆರೆದಿಟ್ಟಿದ್ದೇನೆ ಎಂದರು. ಅಲ್ಲದೆ ಭಾರತ ಸರ್ಕಾರದ ಸಹಾಯಕ ವಿತ್ತ ಸಚಿವನಾಗಿದ್ದ ಕಾಲದಲ್ಲಿ ನಾನು ಕೈಗೊಂಡ ’ಸಾಲಮೇಳ’ ಎಂಬ ಕ್ರಾಂತಿಕಾರಿ ಆರ್ಥಿಕ ಹೆಜ್ಜೆಯ ಕಾಲಘಟ್ಟದಲ್ಲಿ ನನಗಾದ ಅನುಭವ ದೇಶಾದ್ಯಂತ ಸಾಲಮೇಳವನ್ನು ಬಡವರ ಪರವಾಗಿ ನಿಲ್ಲಿಸುವ ಹೋರಾಟದ ಸಂದರ್ಭದಲ್ಲಿ ನಾನು ಎದುರಿಸಬೇಕಾದ ಸವಾಲು, ಪ್ರಾಣಾಪಾಯದ ಸಂದರ್ಭವನ್ನು ಕಣ್ಣಿಗೆ ಕಟ್ಟುವಂತೆ ವಿಶ್ಲೇಷಿಸಿದ್ದೇನೆ ಎಂದರು. ಬ್ರಹ್ಮಶ್ರೀ ನಾರಾಯಣಗುರುಗಳಿಂದ ಸ್ಥಾಪಿಸಲ್ಪಟ್ಟ ಏಕೈಕ ಪುಣ್ಯಕ್ಷೇತ್ರವಾದ ಕುದ್ರೋಳಿಯ ಕ್ಷೇತ್ರದಲ್ಲಿ ಕೈಗೊಂಡ ಸಾಮಾಜಿಕ ಪರಿವರ್ತನೆಗಳು ಚಾಚು ತಪ್ಪದೆ ವಿವರಿಸಿದ್ದೇನೆ. ರಾಜಕಾರಣಿಯಾಗಿ ಮಾದರಿ ಜೀವನವನ್ನು ಹೇಗೆ ನಡೆಸಬಹುದು, ದಲಿತ ಮಹಿಳೆಯ ಪಾದಪೂಜೆ ಮಾಡುವುದರ ಮೂಲಕ ಮಹಿಳೆಯರಿಗೆ ಹೇಗೆ ಗೌರವ ನೀಡಿ ಸಮಾಜಕ್ಕೆ ಮಾದರಿಯಾಗಬೇಕೆಂದು ಸವಿವರವಾಗಿ ಉಲ್ಲೇಖಿಸಿದ್ದೇನೆ ಎಂದು ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ, ವಿಜಯ್ ಕುಮಾರ್ ಶೆಟ್ಟಿ ,ಬಿ.ಜಿ ಸುವರ್ಣ, ಧರ್ಮರಾಜ್ , ಹರಿಕೃಷ್ಣ ಬಂಟ್ವಾಳ್ ಮುಂತಾದವರು ಉಪಸ್ಥಿತರಿದ್ದರು.