ಕಾರ್ಕಳ,ಡಿ 25(Daijiworld News/MSP): ಇತ್ತೀಚೆಗೆ ಮಂಗಳೂರು ನಗರದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋದಿಸಿ ನಡೆಸಿದ ಪ್ರತಿಭಟನೆ ಹಾಗೂ ಗಲಭೆ ಪೂರ್ವ ನಿಯೋಜಿತ ಕುಕೃತ್ಯ ಆಗಿದ್ದು ಸಾರ್ವಜನಿಕರ ಆಸ್ತಿ ಪಾಸ್ತಿ ನಷ್ಟ ಮಾಡುವ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ವ್ಯವಸ್ಥಿತ ಸಂಚು ಇದಾಗಿದ್ದು ಈ ಗಲಭೆಯಲ್ಲಿ ಭಾಗಿಯಾದವರ ವಿರುದ್ದ ಪೊಲೀಸು ಇಲಾಖೆ ಕಠಿಣ ಕ್ರಮ ಜರುಗಿಸಬೇಕು. ಗಲಭೆಯಲ್ಲಿ ಮೃತರಾದವರಿಗೆ ಯಾವುದೇ ಪರಿಹಾರ ನೀಡಬಾರದು, ಸರಕಾರ ಈ ಬಗ್ಗೆ ಮರು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸುತ್ತೇನೆ.
ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ, ಪೋಲಿಸರ ಮೇಲೆ ಮಾರಾಣಾಂತಿಕ ಹಲ್ಲೆ ಮತ್ತು ಅಶಾಂತಿಯನ್ನೇ ಉಂಟು ಮಾಡಬೇಕೆಂಬ ಉದ್ದೇಶದಿಂದ ಗಲಭೆಗೆ ಇಳಿದ ಗುಂಪಿನ ಮೇಲೆ ಪೋಲಿಸರು ಗೋಲಿಬಾರ್ ನಡೆಸಿರುವ ಕ್ರಮ ಸರಿಯಾಗಿದೆ. ಮೃತ ಪಟ್ಟವರ ಮೇಲೆ ಸರಕಾರ ಮೃದು ಧೋರಣೆ ತೋರಿಸಬಾರದು. ಈಗಾಗಲೇ ಘೋಷಣೆ ಮಾಡಿದ ಪರಿಹಾರಧನ ನೀಡುವ ಬಗ್ಗೆ ಮರುಪರಿಶೀಲನೆ ನಡೆಸಬೇಕು ಇಲ್ಲವಾದರೆ ಕಾನೂನು ಸುವ್ಯವಸ್ಥೆ ಕಾಪಾಡುವ ಪೋಲಿಸರ ನೈತಿಕ ಸ್ಥೈರ್ಯ ಕುಗ್ಗಿಸಿದಂತಾಗುತ್ತದೆ.
ಈ ಘಟನೆ ಬಗ್ಗೆ ನಗರದ ಖಾಸಗಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ಸಿಸಿ ಟಿವಿಗಳನ್ನು ಸಮಗ್ರವಾಗಿ ಪರಿಶೀಲನೆ ನಡೆಸಿ ತನಿಖೆ ನಡೆಸಬೇಕು. ಈ ಪ್ರತಿಭಟನೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಅವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಬೇಕು ಹಾಗೂ ಸಾರ್ವಜನಿಕರಿಗೆ ಆದ ಆಸ್ತಿ ಪಾಸ್ತಿ ನಷ್ಟದ ಸಮಗ್ರ ಲೆಕ್ಕ ಹಾಕಿ ಯಾರು ಪ್ರತಿಭಟನೆ ನಡೆಸಿದ್ದಾರೋ ಅವರಿಂದಲೇ ವಸೂಲಿ ಮಾಡಿ ಸಂಬಂಧ ಪಟ್ಟವರಿಗೆ ಪರಿಹಾರ ನೀಡಬೇಕು ಎಂದು ಕಾರ್ಕಳ ಶಾಸಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾದ ವಿ.ಸುನಿಲ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.